ಮಾಹಿತಿ ಹಕ್ಕು ಕಾಯ್ದೆಯ ತಿದ್ದುಪಡಿಗೆ ಮುನ್ನ ಸಿಐಸಿ ಜೊತೆ ಸಮಾಲೋಚಿಸದ ಕೇಂದ್ರ!

Update: 2019-11-30 15:55 GMT

ಹೊಸದಿಲ್ಲಿ, ನ.30: ಕಳೆದ ಜುಲೈನಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಗೆ ತಿದ್ದುಪಡಿಗಳನ್ನು ತರುವ ಮುನ್ನ ಕೇಂದ್ರ ಸರಕಾರವು ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ)ದ ಜೊತೆ ಸಮಾಲೋಚಿಸಿರಲಿಲ್ಲ ಎನ್ನುವುದನ್ನು ಆರ್‌ಟಿಐ ಉತ್ತರವೊಂದು ಬಹಿರಂಗಗೊಳಿಸಿದೆ.

ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು,ತಿದ್ದುಪಡಿಗಳ ಬಗ್ಗೆ ಸಿಐಸಿಯ ಸಲಹೆಯನ್ನು ಕೋರಲಾದ ಪತ್ರ ಅಥವಾ ಟಿಪ್ಪಣಿಯ ಪ್ರತಿಯನ್ನು ಒದಗಿಸುವಂತೆ ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿದ್ದರು. ಇದಕ್ಕೆ ಉತ್ತರಿಸಿರುವ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ,‘ಸಿಐಸಿಯಿಂದ ಯಾವುದೇ ಸಲಹೆಗಳನ್ನು ಕೋರಲಾಗಿರಲಿಲ್ಲ ಮತ್ತು ಸಿಐಸಿ ಯಾವುದೇ ಸಲಹೆಗಳನ್ನು ನೀಡಿರಲಿಲ್ಲ’ ಎಂದು ತಿಳಿಸಿದ್ದಾರೆ.

ಕೇಂದ್ರವು 2019,ಜುಲೈನಲ್ಲಿ ಆರ್‌ಟಿಐ ಕಾಯ್ದೆಗೆ ತಂದಿರುವ ತಿದ್ದುಪಡಿಗಳಲ್ಲಿ ಮಾಹಿತಿ ಆಯುಕ್ತರ ಅಧಿಕಾರಾವಧಿಯನ್ನು ಮೂರು ವರ್ಷಗಳಿಗೆ ಮೊಟಕುಗೊಳಿಸಿದ್ದೂ ಸೇರಿದೆ. ಇದರ ಜೊತೆಗೆ ಕಾಯ್ದೆಯ 13,16 ಮತ್ತು 27ನೇ ಕಲಮ್‌ಗಳಿಗೆ ತಂದಿರುವ ತಿದ್ದುಪಡಿಗಳು ಕೇಂದ್ರೀಯ ಮತ್ತು ರಾಜ್ಯ ಮಾಹಿತಿ ಆಯೋಗಗಳ ಮಾಹಿತಿ ಆಯುಕ್ತರ ವೇತನ ಮತ್ತು ಭತ್ಯೆಗಳನ್ನು ನಿರ್ಧರಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಿವೆ.

ತಿದ್ದುಪಡಿಗಳನ್ನು ತಂದಿರುವ ಮತ್ತು ನಿಯಮಗಳನ್ನು ಘೋಷಿಸಿರುವ ನಿಗೂಢ ರೀತಿಯು ಎಲ್ಲ ಕರಡು ನಿಯಮಾವಳಿಗಳನ್ನು ಅಭಿಪ್ರಾಯ/ಸಲಹೆಗಳಿಗಾಗಿ ಸಾರ್ವಜನಿಕರ ಮುಂದಿರಿಸುವುದನ್ನು ಅಗತ್ಯವಾಗಿಸಿರುವ ಶಾಸಕಾಂಗ ಪೂರ್ವ ಸಮಾಲೋಚನಾ ನೀತಿ 2014ನ್ನು ಉಲ್ಲಂಘಿಸಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News