ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ಹಿಂದೆಗೆತ ಆತಂಕಕಾರಿ: ಶಿವಸೇನೆ

Update: 2019-11-30 16:33 GMT
Photo: PTI

ಮುಂಬೈ, ನ.30: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಎಸ್‌ಪಿಜಿ ಭದ್ರತೆ ಹಿಂಪಡೆದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಶಿವಸೇನೆ, ಇಂತಹ ವಿಷಯಗಳಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಬದಿಗಿರಿಸಬೇಕು ಎಂದು ಹೇಳಿದೆ.

ಕಾಂಗ್ರೆಸ್‌ನೊಂದಿಗೆ ಅಥವಾ ಗಾಂಧಿ ಕುಟುಂಬದೊಂದಿಗೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ . ಯಾರು ಕೂಡಾ ಇನ್ನೊಬ್ಬರ ಜೀವನದಲ್ಲಿ ಆಟವಾಡಬಾರದು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

ಗಾಂಧಿ ಕುಟುಂಬಕ್ಕೆ ಎದುರಾಗಿದ್ದ ಬೆದರಿಕೆ ಈಗ ಕಡಿಮೆಯಾಗಿದೆ ಎಂದು ಕೇಂದ್ರದ ಗೃಹ ಇಲಾಖೆಯ ಯಾವ ವ್ಯಕ್ತಿ ಭಾವಿಸಿದ್ದ ಎಂಬ ಪ್ರಶ್ನೆ ಇಲ್ಲಿ ಮೂಡುತ್ತಿದೆ. ಗಾಂಧಿ ಕುಟುಂಬಕ್ಕೆ ಈಗಲೂ ಬೆದರಿಕೆ ಇರುವುದರಿಂದ ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಗಮನ ಹರಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.

ದಿಲ್ಲಿ, ಇರಲಿ ಮಹಾರಾಷ್ಟ್ರವಿರಲಿ, ಭಯಮುಕ್ತ ವಾತಾವರಣ ಇದ್ದರೆ ಎಸ್‌ಪಿಜಿ ಭದ್ರತೆ ಹಿಂಪಡೆಯುವ ಬಗ್ಗೆ ಯಾರದ್ದೂ ಆಕ್ಷೇಪವಿಲ್ಲ. ಇಂತಹ ವಾತಾವರಣ ನೆಲೆಸುವಂತೆ ಮೊದಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಪ್ರಧಾನಿ, ಗೃಹ ಸಚಿವರು, ಸಚಿವರು ಹಾಗೂ ಆಡಳಿತ ಪಕ್ಷದ ಇತರ ಮುಖಂಡರು ತಮ್ಮ ರಕ್ಷಣಾ ಪಂಜರವನ್ನು ತ್ಯಜಿಸಲು ಸಿದ್ಧರಿಲ್ಲ. ಗುಂಡು ನಿರೋಧಕ ವಾಹನದ ಅಗತ್ಯವೂ ಕಡಿಮೆಯಾಗಿಲ್ಲ. ಗಾಂಧಿ ಕುಟುಂಬಕ್ಕೆ ನೀಡಲಾದ ಭದ್ರತಾ ವ್ಯವಸ್ಥೆಯಲ್ಲಿ ಹಳೆಯ ವಾಹನಗಳನ್ನು ನಿಯೋಜಿಸಲಾಗಿದೆ ಎಂಬ ವರದಿಯೂ ಕಳವಳಕಾರಿಯಾಗಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಲೇಖನದಲ್ಲಿ ಹೇಳಲಾಗಿದೆ.

 ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ಎಸ್‌ಪಿಜಿ ಭದ್ರತಾ ವ್ಯವಸ್ಥೆಯನ್ನು ಈ ತಿಂಗಳ ಆರಂಭದಲ್ಲಿ ಹಿಂಪಡೆದಿದ್ದ ಕೇಂದ್ರ ಸರಕಾರ ,ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News