ಫಾಸ್ಟ್‌ಟ್ಯಾಗ್-ಟೋಲ್ ದಂಡನೆ; ಸ್ಪಷ್ಟನೆ ನೀಡಲು ಮನವಿ
ಉಡುಪಿ, ನ.30: ಡಿ.1ರಿಂದ ನವಯುಗ ಮತ್ತು ಇನ್ನಿತರ ಟೋಲ್‌ಗಳಲ್ಲಿ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಬೇಕು, ಇಲ್ಲದಿದ್ದರೆ ದಪ್ಪಟ್ಟು ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕು ಎಂದು ಈಗಾಗಲೇ ವರದಿಯಾಗಿದೆ. ಈ ಬಗ್ಗೆ ಬಳಕೆದಾರರಿಗೆ ಕೆಲವು ಸ್ಪಷ್ಟನೆ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ-66 ಉಳಿಸಿ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.
2010ರ ಮಾ.9ರಂದು ಕುಂದಾಪುರದಿಂದ ಸುರತ್ಕಲ್‌ವರೆಗೆ ಹೆದ್ದಾರಿ ಅಗಲೀಕರಣ ಯೋಜನೆಗೆ ಕರಾರು ಆಗಿ ಸೆ.5ರಂದು ಕೆಲಸ ಪ್ರಾರಂಭವಾಗಿದೆ. ಕರಾರು ಪ್ರಕಾರ 910 ದಿನಗಳಲ್ಲಿ ಮುಗಿಯಬೇಕಿದ್ದ ಕೆಲಸ ಇನ್ನೂ ಪೂರ್ಣ ಗೊಂಡಿಲ್ಲ. ಕುಂದಾಪುರ ಮೇಲ್ಸೆತುವೆ, ಬಸ್ರೂರು ಮೂರುಕೈ ಅಂಡರ್‌ಪಾಸ್, ಪಡುಬಿದ್ರಿ ಪ್ರದೇಶದ ಕೆಲಸ 9 ವರ್ಷಗಳ ನಂತರವೂ ಬಾಕಿ ಇದೆ.
ಸಾಕಷ್ಟು ಪ್ರಮಾಣದಲ್ಲಿ ಸರ್ವಿಸ್ ರಸ್ತೆಗಳನ್ನು ಮಾಡಿಲ್ಲ. ಆದರೂ ಕೂಡಾ ಕಳೆದ ಕೆಲವು ವರ್ಷಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಮತ್ತು ಈ ಕೆಲಸಗಳು ಯಾವಾಗ ಸಂಪೂರ್ಣಗೊಳ್ಳುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಸಮಿತಿಯ ಸಂಚಾಲಕ ಬಿ.ಗೋವಿಂದರಾಜ ಹೆಗ್ಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡಿ.1ರಿಂದ ಫಾಸ್ಟ್‌ಟ್ಯಾಗ್ ಅಳವಡಿಸದೇ ಇದ್ದಲ್ಲಿ, ವಾಹನಗಳಿಂದ ದುಪ್ಪಟ್ಟು ವಸೂಲಿ ಮಾಡುವ ವರದಿಗಳಿದ್ದು, ಇದು ನಿಜವಾಗಿದ್ದಲ್ಲಿ ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ತಿಳಸಬೇಕು. ಸರಕಾರಕ್ಕೆ ಪಾವತಿಸುವ ತೆರಿಗೆಯನ್ನು ಸಕಾಲದಲ್ಲಿ ಪಾವತಿಸದಿದ್ದರೆ ದಂಡನೆ ವಿಧಿಸುವುದನ್ನು ಕೇಳಿದ್ದೇವೆ. ಆದರೆ ಟೋಲ್ ಯಾರ ರೀತಿಯ ತೆರಿಗೆ ಎಂದವರು ಪ್ರಶ್ನಿಸಿದ್ದಾರೆ. ಬಿಓಟಿ ಪದ್ಧತಿಯಲ್ಲಿ ಏಜೆನ್ಸಿಯೊಂದು ರಸ್ತೆಗಳನ್ನು ನಿರ್ಮಿಸುತಿದ್ದು, ಅದಕ್ಕೆ ಕನಿಷ್ಠ ಟೋಲ್ ಪಾವತಿಸಬೇಕಾದ್ದು ನ್ಯಾಯ ಎಂದವರು ಪ್ರತಿಪಾದಿಸಿದರು.
ಟೋಲ್ ಹಾಗೂ ಅದರ ವ್ಯಾಪ್ತಿಯ ಬಗ್ಗೆ ಇನ್ನೂ ಗೊಂದಲ ಮುಂದುವರಿ ದಿದೆ. ಈ ಮಧ್ಯ ಫಾಸ್ಟ್‌ಟ್ಯಾಗ್ ಬಂದು, ನಿಗದಿತ ಅವಧಿಯೊಳಗೆ ಪಾವತಿಸದೇ ಇದ್ದಲ್ಲಿ ದುಪ್ಪಟ್ಟು ಪಾವತಿಸಬೇಕೆನ್ನುವ ಕಾನೂನು ಎಲ್ಲಿದೆ? ಕೇಂದ್ರ ಸರಕಾರ ಅಥವಾ ಹೆದ್ದಾರಿ ಇಲಾಖೆಯ ಸ್ಪಷ್ಟ ಆದೇಶವಿದ್ದಲ್ಲಿ ಅದನ್ನು ದಯವಿಟ್ಟು ಸಾರ್ವಜನಿಕರ ಗಮನಕ್ಕೆ ತರುವಂತೆ ಅವರು ಒತ್ತಾಯಿಸಿದ್ದಾರೆ.
ಅಲ್ಲದೇ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸದೆ ಇರುವುದಕ್ಕೆ ಗುತ್ತಿಗೆ ಕಂಪೆನಿಗೆ ಎಷ್ಟು ದಂಡ ವಿಧಿಸಲಾಗಿದೆ ಹಾಗೂ ಅವರು ಎಷ್ಟನ್ನು ಪಾವತಿಸಿದ್ದಾರೆ ಎಂಬುದನ್ನು ಸಹ ಸಾರ್ವಜನಿಕರಿಗೆ ಪ್ರಚುರ ಪಡಿಸಬೇಕು ಎಂದವರು ಹೇಳಿದರು.
ಒಂದು ವೇಳೆ ದುಪ್ಪಟ್ಟು ಪಾವತಿಸಿದಲ್ಲಿ ಆ ಮೊತ್ತ ಯಾರಿಗೆ ಹೋಗುತ್ತದೆ ಎಂಬುದನ್ನೂ ತಿಳಿಸಿ ಗೊಂದಲವನ್ನು ನಿವಾರಿಸಿ. ಈ ಬಗ್ಗೆ ಸರಕಾರದ ಆದೇಶ ಇಲ್ಲದಿದ್ದಲ್ಲಿ ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ರಾ.ಹೆದ್ದಾರಿ-66 ಉಳಿಸಿ ಸಮಿತಿಯ ಸಂಚಾಲಕ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.
ಒಂದು ವೇಳೆ ದುಪ್ಪಟ್ಟು ಪಾವತಿಸಿದಲ್ಲಿ ಆ ಮೊತ್ತ ಯಾರಿಗೆ ಹೋಗುತ್ತದೆ ಎಂಬುದನ್ನೂ ತಿಳಿಸಿ ಗೊಂದಲವನ್ನು ನಿವಾರಿಸಿ. ಈ ಬಗ್ಗೆ ಸರಕಾರದ ಆದೇಶ ಇಲ್ಲದಿದ್ದಲ್ಲಿ ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ರಾ.ಹೆದ್ದಾರಿ-66 ಉಳಿಸಿ ಸಮಿತಿಯ ಸಂಚಾಲಕ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.