ರಾಷ್ಟ್ರ ರಾಜಕಾರಣದಲ್ಲಿ ಎಸ್ಡಿಪಿಐ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ : ಅಸ್ಲಮ್ ಹಸನ್
ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯಕರ್ತರ ಸಮಾವೇಶವು ಮಂಗಳೂರು ಬಂದರಿನ ಝೀನತ್ ಭಕ್ಷ್ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ವಿಧಾನ ಸಭಾ ಸಮಿತಿ ಅಧ್ಯಕ್ಷ ಸುಹೈಲ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜ್ಞಾವಂತ ಜಾತ್ಯಾತೀತ ಜನರು ಎಸ್.ಡಿ.ಪಿ.ಐ ಪಕ್ಷವನ್ನು ಮೆಚ್ಚಲು ಆರಂಭಿಸಿದ್ದಾರೆ. ಇದರ ಭಾಗವಾಗಿ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳಲ್ಲಿ ಪಕ್ಷ ಅಭೂತಪೂರ್ವ ಯಶಸ್ಸನ್ನು ಕಂಡಿರುವುದು ಮತ್ತು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇತರ ಪ್ರಾದೇಶಿಕ ಪಕ್ಷಗಳನ್ನು ಬದಿಗಿರಿಸಿ ಮತದಾರರು ಎಸ್.ಡಿ.ಪಿ.ಐಯನ್ನು ಮೂರನೇ ಅತೀ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿರುವುದು. ಜನರು ನಮ್ಮ ಮೇಲೆ ನಂಬಿಕೆಯಿಟ್ಟು ಅಧಿಕಾರ ನೀಡುತ್ತಿರುವಾಗ ಅವರಿಗೆ ಬೇಕಾಗಿ ನಿಸ್ವಾರ್ಥವಾಗಿ ಇನ್ನಷ್ಟು ಕೆಲಸ ಕಾರ್ಯಗಳು ಮಾಡಬೇಕಾದದ್ದು ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಸಮಿತಿ ಸದಸ್ಯ ಅಸ್ಲಮ್ ಹಸನ್ ಮಾತನಾಡಿ ಎಸ್.ಡಿ.ಪಿ.ಐ ಪಕ್ಷವು ರಾಷ್ಟ್ರ ರಾಜಕೀಯದಲ್ಲಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮುತ್ತಿದೆ. ಇತರ ನಕಲಿ ಜಾತ್ಯಾತೀತ ಪಕ್ಷಗಳಿಗೆ ಹಾಗೂ ಕೋಮುವಾದಿ ಪಕ್ಷಗಳಿಗೂ ಕೂಡ ಎಸ್.ಡಿ.ಪಿ.ಐ ಬೆಳವಣಿಗೆ ತಲೆನೋವಾಗಿ ಪರಿಣಮಿಸಿದೆ ಎಂದರು.
ವೇದಿಕೆಯಲ್ಲಿ ಎಸ್ ಡಿಟಿಯು ರಾಜ್ಯ ಅಧ್ಯಕ್ಷ ಜಲೀಲ್ ಕೃಷ್ಣಾಪುರ ಉಪಸ್ಥಿತರಿದ್ದರು. ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಅಕ್ಬರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸದಸ್ಯರಾದ ಸಿದ್ದೀಕ್ ಬೆಂಗರೆ ವಂದಿಸಿದರು.