×
Ad

ಶ್ವಾಸಕೋಶ ಕಾಯಿಲೆಗೆ ಸಮಗ್ರ ಚಿಕಿತ್ಸೆ ಪಡೆಯಿರಿ: ಡಾ. ನಂದ ಕಿಶೋರ

Update: 2019-11-30 22:59 IST

ಮಂಗಳೂರು : ದೀರ್ಘಕಾಲದ ಶ್ವಾಸಕೋಶ ಸಂಬಂಧಿ ಕಾಯಿಲೆ ಸಮಗ್ರ ಚಿಕಿತ್ಸೆಗೆ ಒಳಪಡುವುದು ಉತ್ತಮ. ಪ್ರಾರಂಭ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಟ್ಟಾಗ ಸಿಒಪಿಡಿ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಅದಕ್ಕೆ ವಿವಿಧ ಆರೋಗ್ಯ ತಜ್ಞರ ಸಂವಾದ ಉತ್ತಮ ಕಾರ್ಯ ಎಂದು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶ್ವಾಸಕೋಶ ತಜ್ಞ  ಡಾ. ನಂದ ಕಿಶೋರ ಅಭಿಪ್ರಾಯ ಪಟ್ಟರು.

ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶ್ವಾಸಕೋಶ ಚಿಕಿತ್ಸಾ ವಿಭಾಗದಿಂದ ಆಯೋಜಿಸಿದ ಸಿಒಪಿಡಿ ಕಾಯಿಲೆಗೆ ಸಮಗ್ರ ಚಿಕಿತ್ಸೆ ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪ್ರಪಂಚದಲ್ಲಿ ವೇಗವಾಗಿ ಮರಣವನ್ನಪ್ಪುವ ಖಾಯಿಲೆಯಲ್ಲಿ ಸಿಒಪಿಡಿ ಮುಂಚೂಣಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಸಮಗ್ರ ಚಿಕಿತ್ಸೆ ರೂಪಿಸಬೇಕು ಎಂದರು.

ಸಂವಾದ ಕಾರ್ಯದ ಅಧ್ಯಕ್ಷತೆ ವಹಿಸಿದ ಡಾ. ಪ್ರಭಾ ಅಧಿಕಾರಿ ಮಾತನಾಡುತ್ತಾ ಸಿಒಪಿಡಿ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಬೇಕು ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ವಹಿಸಬೇಕು ಎಂದರು.

ಶ್ವಾಸಕೋಶ ವೈದ್ಯ ಡಾ. ಪ್ರೀತಿರಾಜ್ ಬಳ್ಳಾಲ್ ಮಾತನಾಡುತ್ತಾ ಜಾಗತಿಕ ಮಟ್ಟದಲ್ಲಿ ಶ್ವಾಸಕೋಶ ಕಾಯಿಲೆಯ ಹಂತವನ್ನು ನಿರ್ಧರಿಸಿ ಚಿಕಿತ್ಸೆಯ ಪದ್ಧತಿಯನ್ನು ರೂಪಿಸಲಾಗುತ್ತದೆ. ಮನೋರೋಗ ತಜ್ಞ ಡಾ. ರವಿಚಂದ್ರ ಅವರು ಶ್ವಾಸಕೋಶ ಕಾಯಿಲೆಗೆ ಪ್ರಮುಖ ಕಾರಣವಾದ ಧೂಮಪಾನ ತ್ಯಜಿಸಬೇಕು. ನೇರವಾಗಿ ಧೂಮಪಾನ ಬಿಡಲು ಸಾಧ್ಯವಿಲ್ಲದಾಗ ಔಷಧಿಯ ಸಹಾಯದೊಂದಿಗೆ ಧೂಮಪಾನ ಬಿಟ್ಟರೆ ಮಾತ್ರ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದರು.

ಪಿಸಿಯೋಥೆರಪಿಸ್ಟ್  ಎಂ ಆರ್. ಶಿವಕುಮಾರ್ ಮಾತನಾಡಿ, ಸಿಒಪಿಡಿಯಿಂದ ದೇಹದ ಮಾಂಸಖಂಡಗಳು ಬಲಹೀನವಾಗುತ್ತದೆ. ದೈಹಿಕ ಶಕ್ತಿವರ್ಧನೆಗೆ ಹಲವಾರು ವ್ಯಾಯಾಮಗಳು ಸಹಕಾರಿ ಎಂದು ವಿವರಿಸಿದರು.

ಕುಶಾಲಪ್ಪ ಗೌಡ ಎನ್. ಯೋಗದ ಮಹತ್ವವನ್ನು ವಿವರಿಸುತ್ತಾ ಯೋಗಾಭ್ಯಾಸ ವ್ಯಕ್ತಿಯಲ್ಲಿ ಮರಣ ಭಯವನ್ನು ಹೋಗಲಾಡಿಸಿ ಆತ್ಮವಿಶ್ವಾಸವನ್ನು ನೀಡುತ್ತದೆ. ಸರಳವಾದ ಕ್ರಿಯೆ, ಯೋಗಾಸನ, ಪ್ರಾಣಾಯಾಮ, ಧ್ಯಾನದ ಅಭ್ಯಾಸ ವ್ಯಕ್ತಿಯನ್ನು ಚಟುವಟಿಕೆಯಲ್ಲಿ ಇಟ್ಟು ಆರೋಗ್ಯ ಉತ್ತಮಪಡಿಸಬಹುದು ಎಂದರು.

ಆಹಾರ ತಜ್ಞೆ  ಹರ್ಷಿತಾ ಮಾತನಾಡುತ್ತಾ ದೇಹದ ಪೋಷಕಾಂಶ ಕಡಿಮೆಯಾಗುವುದು ಹಾಗೂ ಆಹಾರ ಕಡಿಮೆ ಸೇವನೆ ಈ ಹಂತದಲ್ಲಿ ಸರ್ವೆ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪೌಷ್ಠಿಕಾಂಶ ಆಹಾರಕ್ಕೆ ಗಮಣ ಕೊಡಬೇಕು ಎಂದರು.

ಶ್ವಾಸಕೋಶ ಥೆರಪಿಸ್ಟ್  ಅಂಜಲಿ ಶ್ವಾಸಕೋಶ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಇರ್ಫಾನ್ ಕಾರ್ಯಕ್ರಮ ಸಂಯೋಜಕರಾಗಿ ಸಂಪನ್ಮೂಲ ವ್ಯಕ್ತಿಗಳ ಸಂವಾದ ನಡೆಸಿದರು. ಡಾ. ಶರತ್‍ಚಂದ್ರ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News