ಭರತ ಮುನಿ ಜಯಂತ್ಯುತ್ಸವ: ಭರತ ಪ್ರಶಸ್ತಿ ಪ್ರದಾನ
ಉಡುಪಿ, ಡಿ.1: ಪಾಶ್ಚಿಮಾತ್ಯ ಪ್ರಭಾವವನ್ನು ದೂರ ಮಾಡಿ ಭಾರತೀಯ ಪರಂಪರೆ ಉಳಿಸುವ ಕಾರ್ಯ ಅಗತ್ಯವಾಗಿ ಮಾಡಬೇಕು. ನೃತ್ಯದಿಂದ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಲು ಸಾಧ್ಯ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ ಆಶ್ರಯದಲ್ಲಿ ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನದ ವತಿಯಿಂದ ರವಿವಾರ ರಾಜಾಂಗಣ ದಲ್ಲಿ ಆಯೋಜಿಸಲಾದ ಭರತಮುನಿ ಜಯಂತ್ಯುತ್ಸವ ಹಾಗೂ ಸಂಸ್ಥೆಯ ತ್ರಿಂಶತ್ ವರ್ಷದ ಉದ್ಘಾಟನೆಯನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಬಿ.ಗೋಪಾಲಕೃಷ್ಣ ಸಾಮಗ ಮಾತನಾಡಿ, ಇಂದು ಭರತ ನಾಟ್ಯದಿಂದಾಗಿ ಭಾರತೀಯ ಸಂಸ್ಕೃತಿ ಉಳಿದುಕೊಂಡಿದೆ. ಸಾಧನೆಯಿಂದ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ್ದ ನ್ಯಾಯವಾದಿ, ನಾಟಕಕಾರ ಶಶಿರಾಜ್ ರಾವ್ ಕಾವೂರು ಮಾತನಾಡಿ, ಸಂಸ್ಕೃತಿ, ಆಚಾರ ವಿಚಾರ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಪೋಷಕರು ಮೂಲ ಪರಂಪರೆಯನ್ನು ಉಳಿಸಲು ಣ ತೊಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು ಶಾರದಾ ನೃತ್ಯಾಲಯದ ನೃತ್ಯ ಗುರು ವಿದುಷಿ ಇಂದು ನಾಡಿಗ್ ಬಿ.ಎಸ್, ಪುತ್ತೂರು ವಿಶ್ವ ಕಲಾನಿಕೇತನದ ನೃತ್ಯ ಗುರು ವಿದುಷಿ ನಯನಾ ವಿ.ರೈ ಮತ್ತು ಯಕ್ಷಗಾನ ಭಾಗವತ ವಿದುಷಿ ಲೀಲಾವತಿ ಬೈಪಡಿತ್ತಾಯ ಬಜಪೆ ಅವರಿಗೆ ಭರತ ಪ್ರಶಸ್ತಿ, ವಿದುಷಿ ಪ್ರತೀಕ್ಷಾ ಯು., ವಿದುಷಿ ಮಯೂರಿ ಶಶಿರಾಜ್, ವಿದುಷಿ ಕು.ರಾಧಿಕಾ ಅವರಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಮತ್ತು ವಾಸುಕಿ ಡೆಕೋರೇಟರ್ಸ್‌ನ ನಾಗರಾಜ ಉಪಾಧ್ಯಾಯರಿಗೆ ಕಲಾರ್ಪಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಬಾರಿ ಭರತನಾಟ್ಯ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಂಗೀತ ಗುರು ಪ್ರೇಮಾ ಆರ್.ತಂತ್ರಿ, ಪವನ್‌ರಾಜ್ ಸಾಮಗ ಮತ್ತು ಪೃಥ್ವಿರಾಜ್ ಸಾಮಗ ಉಪಸ್ಥಿತರಿದ್ದರು.
ನೃತ್ಯಗುರು ವಿದುಷಿ ವೀಣಾ ಎಂ.ಸಾಮಗ ಸ್ವಾಗತಿಸಿದರು. ಸಂಸ್ಥೆಯ ಸಂಚಾಲಕ ಮುರಳೀಧರ ಸಾಮಗ ವಂದಿಸಿದರು. ವಿದುಷಿ ರಶ್ಮಿ ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ನಂತರ ಪವನ್‌ರಾಜ್ ಸಾಮಗ ಅವರಿಂದ ವೇಣುವಾದನ ಕಾರ್ಯಕ್ರಮ ಮತ್ತು ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.