×
Ad

ಬಡವ -ಶ್ರೀಮಂತರ ಮಧ್ಯೆ ಕಂದಕ ನಿರ್ಮಾಣ: ಡಾ.ಮೋಹನ್ ಆಳ್ವ

Update: 2019-12-01 19:50 IST

ಉಡುಪಿ, ಡಿ.1: ದೇಶದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ಸಮಾಜದಲ್ಲಿ ಸಾಕಷ್ಟು ಕಂದಕಗಳು ನಿರ್ಮಾಣವಾಗುತ್ತಿವೆ. ಬಡವರು ಹಾಗೂ ಶ್ರೀಮಂತರ ಮಧ್ಯೆ ಬಹಳ ದೊಡ್ಡ ಅಂತರ ಕಾಣುತ್ತಿದ್ದೇವೆ. ಇದನ್ನು ಹೋಗಲಾಡಿಸಲು ಸರಕಾರ, ಸ್ವಾಮೀಜಿ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.

ಉಡುಪಿ ಹೋಟೆಲ್ ಸ್ವದೇಶ್ ಹೆರಿಟೇಜ್ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ನ ವಿಂಶತಿ ಸಂಭ್ರಮ -2019 ಕಾರ್ಯಕ್ರಮದಲ್ಲಿ ಲೇಖಕ ತಾರಾನಾಥ ಮೇಸ್ತ, ನಿತ್ಯಾನಂದ ಒಳ ಕಾಡು ಕುರಿತು ಬರೆದ ‘ಆಪದ್ಭಾಂಧವ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಸಮಾಜ ಮತ್ತು ಧರ್ಮ ಎಂಬ ಪದವನ್ನು ಇಂದು ದುರುಪಯೋಗ ಮಾಡ ಲಾಗುತ್ತಿದೆ. ಜಾತಿಯನ್ನು ಸಮಾಜದ ಜೊತೆ ಸೇರಿಸಿ ದುರ್ಬಳಕೆ ಮಾಡುತ್ತಿ ರುವುದು ಸರಿಯಲ್ಲ. ಜಾತಿಯನ್ನು ಸಮಾಜ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರ ಒಳಗೊಳ್ಳುವಿಕೆಯೇ ಸಮಾಜದ ಪರಿಕಲ್ಪನೆಯಾಗಿದೆ. ಅದೇ ರೀತಿ ಎಲ್ಲ ಸಮುದಾಯಗಳು ಸೇರಿರುವ ಧರ್ಮವೇ ನಿಜವಾದ ಸಮಾಜ ಎಂದು ಅವರು ಅಭಿಪ್ರಾಯ ಪಟ್ಟರು.

ಇಂದು ಆಧುನಿಕ ಶಾಲಾ ಪಠ್ಯ ಪುಸ್ತಕಗಳ ಅಧ್ಯಯನ ಸಮಾಜದ ಪರಿಕಲ್ಪನೆ ಕೊಡುವುದಿಲ್ಲ. ಇವು ಮೆದುಳಿನ ಜ್ಞಾನವನ್ನು ವೃದ್ಧಿಸುತ್ತದೆಯೇ ಹೊರತು ಮನಸ್ಸನ್ನು ಅರಳಿಸುವ ಕೆಲಸ ಮಾಡುವುದಿಲ್ಲ. ಬಯಲು ಶಾಲೆಗಳು ಸಮಾಜದ ಪರಿಕಲ್ಪನೆಯನ್ನು ಮೂಡಿಸುವ ಕಾರ್ಯ ಮಾಡುತ್ತದೆ. ಬದ್ಧತೆ ಇರುವವರು ತೆಗೆದುಕೊಳ್ಳುವ ವಿಚಾರ ಹಾಗೂ ಕೈಗೊಳ್ಳುವ ಕಾರ್ಯ ಜೀವಂತ ವಾಗಿರುತ್ತದೆ ಎಂದು ಅವರು ತಿಳಿಸಿದರು.

ಸಾಲುಮರದ ತಿಮ್ಮಕ್ಕರಂತೆ ಸಾಧನೆ ಮಾಡಿರುವ ನಿತ್ಯಾನಂದ ಒಳಕಾಡು ಅವರ ಜೀವನ ಯಶೋಗಾಥೆಯು ಪಠ್ಯವಾಗಬೇಕು. ಕೇವಲ ಹಣದಿಂದ ಋಣ ತೀರಿಸಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಮಾಡಿದಾಗ ಮಾತ್ರ ಸಮಾಜದ ಋಣ ತೀರಿಸಲು ಸಾಧ್ಯ. ನಾವು ಸಮಾಜದಿಂದ ಪಡೆದ ಸಂಪತ್ತನ್ನು ಸಮಾಜಕ್ಕೆ ವಾಪಸ್ಸು ನೀಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಬಿಲ್ಡರ್ಸ್‌ ಅಸೋಸಿ ಯೇಶನ್ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿ, ಸಮಾಜ ಸೇವೆಯಲ್ಲಿ ನಿತ್ಯಾನಂದ ಒಳಕಾಡು ಮಾಡಿರುವ ಸಾಧನೆಯು ಗಿನ್ನಿಸ್ ದಾಖಲೆಗದೆ ಸೇರ ಬೇಕಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಎಂಬುದು ಇದೆ. ಆದರೆ ಸ್ಪರ್ಧೆ ಇಲ್ಲದಿರುವ ಏಕೈಕ ಕ್ಷೇತ್ರ ಅಂದರೆ ಸಮಾಜ ಸೇವೆ ಮಾತ್ರ. ಇದರಲ್ಲಿ ಯಾರು ಸ್ಪರ್ಧೆ ಒಡ್ಡಲು ಬರುವುದಿಲ್ಲ ಎಂದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಎಂ. ನಾಗೇಶ್ ಹೆಗ್ಡೆ ವಹಿಸಿದ್ದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಕೃತಿ ಪರಿಚಯ ಮಾಡಿದರು. ಸನ್ಮಾರ್ಗ ಪತ್ರಿಕೆಯ ಸಂಪಾದಕ ಏ.ಕೆ.ಕುಕ್ಕಿಲ, ಲೇಖಕ ತಾರಾನಾಥ ಮೇಸ್ತ ಉಪಸ್ಥಿತರಿದ್ದರು.

ನಾಗರಿಕ ಸಮಿತಿ ಟಸ್ಟ್ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News