ಕಾಲಿಗೆ ಸರಪಳಿ ಬಿಗಿದು ನದಿಯಲ್ಲಿ ಈಜುವ ಮೂಲಕ ಸಾಧನೆ

Update: 2019-12-01 15:50 GMT

ಕುಂದಾಪುರ, ಡಿ.1: ಕುಂದಾಪುರ ಖಾರ್ವಿಕೇರಿಯ ಈಜುಪಟು ಸಂಪತ್ ಡಿ.ಖಾರ್ವಿ (17) ಕಾಲಿಗೆ ಸರಪಳಿಗಳನ್ನು ಬಿಗಿದು ಪಂಚ ಗಂಗಾವಳಿ ನದಿಯಲ್ಲಿ ನಿರಂತರ ಮೂರು ಗಂಟೆಗಳ ಕಾಲ ಸುಮಾರು 24 ಕಿ.ಮೀ. ದೂರ ಈಜುವ ಮೂಲಕ ಸಾಧನೆ ಮಾಡಿದ್ದಾರೆ.

ಬಸ್ರೂರು ರೈಲು ಸೇತುವೆ ಬಳಿಯಿಂದ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಕಾಲಿಗೆ ಸರಪಳಿ ಬಿಗಿದು ಆರಂಭಗೊಂಡ ಸಂಪತ್ ಅವರ ಈಜಿನ ಜೈತ್ರ್ಯ ಯಾತ್ರೆಯು ಮೂರು ಗಂಟೆಗಳ ನಿರಂತರ ಶ್ರಮದ ಮೂಲಕ ಸಂಜೆ 5 ಗಂಟೆ 5 ನಿಮಿಷಕ್ಕೆ ಗಂಗೊಳ್ಳಿ ಕಡುವಿನ ಸಮೀಪ ಅಂತ್ಯಗೊಂಡಿತು.

ಈ ಸಂದರ್ಭದಲ್ಲಿ ಸಂಪತ್ ಅವರಿಗೆ ರಕ್ಷಣೆಯಾಗಿ ಈಜುಗಾರರಾದ ಸಂಪತ್ ತಂದೆ ದೇವರಾಯ ಖಾರ್ವಿ, ಸುಬ್ರಹ್ಮಣ್ಯ ಖಾರ್ವಿ, ಮಣಿ ಖಾರ್ವಿ, ರಂಜಿತ್ ಖಾರ್ವಿ, ಹರೀಶ ಖಾರ್ವಿ ಮೊದಲಾದವರು ಈಜಿಕೊಂಡು ಸರಿ ಸುಮಾರು 25 ಕಿ.ಮೀ.ಷ್ಟು ಕ್ರಮಿಸಿ ಸಹಕಾರ ನೀಡಿದರು.

ಸಂಪತ್ ಈಜುತ್ತ ಸಾಗಿದ ಹಾದಿಯುದ್ದಕ್ಕೂ ದೋಣಿಗಳಲ್ಲಿ ಹಿಂಬಾಲಿಸಿದ ಅಭಿಮಾನಿಗಳು ಡೋಲು ಚಂಡೆ ವಾದನಗಳನ್ನು ಬಾರಿಸುವ ಮೂಲಕ ಹುರಿದುಂಬಿಸಿದರು. ತೀರದ ಉದ್ದಕ್ಕೂ ಕಾದು ನಿಂತಿದ್ದ ಸಾವಿರಾರು ಮಂದಿ ಸಾರ್ವಜನಿಕರು ಸಂಪತ್ ಅವರ ಸಾಧನೆಗೆ ಸಾಕ್ಷಿಯಾದರು. ಗಂಗೊಳ್ಳಿ ಕಡುವಿನ ಸಮೀಪ ನೀರಿನ ಅಲೆಯ ಅಬ್ಬರ ಹೆಚ್ಚಿದ್ದರೂ ಧೃತಿಗೇಡದ ಸಂಪತ್ ಗುರಿ ತಲುಪುವಲ್ಲಿ ಯಶಸ್ವಿಯಾದರು.

ಖಾರ್ವಿಕೇರಿಯ ಬಡ ಮೀನುಗಾರ ಕುಟುಂಬದ ದೇವರಾಯ ಖಾರ್ವಿ ಹಾಗೂ ಸಂಜೀವಿ ದಂಪತಿ ಪುತ್ರರಾಗಿರುವ ಸಂಪತ್ ಖಾರ್ವಿ, ಕುಂದಾಪುರ ಭಂಡಾರ್‌ಕಾರ್ ಕಾಲೇಜಿನ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಓರ್ವ ತಂಗಿ ಇದ್ದಾಳೆ.

ಗಂಗೊಳ್ಳಿ ಶ್ರೀಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿ, ಸಂಪತ್ ಅವರ ಕಾಲುಗಳಿಗೆ ಸರಪಳಿಗಳನ್ನು ತೋಡಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆ ವೈದ್ಯ ಡಾ. ವಿಜಯ ಶಂಕರ್, ದೈಹಿಕ ಶಿಕ್ಷಕ ಆನಂದ ಪೂಜಾರಿ, ತಲ್ಲೂರು ಗ್ರಾಪಂ ಸದಸ್ಯ ಸುನೀಲ್ ಖಾರ್ವಿ ತಲ್ಲೂರು, ಅಶೋಕ್ ಕೆರೆಕಟ್ಟೆ, ಮಾನಸ ಜ್ಯೋತಿಯ ಮುಖ್ಯಸ್ಥೆ ಶೋಭಾ ಮಧ್ಯಸ್ಥ ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿ ಬಂದರಿನಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ವಾಸಪ್ಪ ನಾಯ್ಕಿ, ಸಂಪತ್‌ನನ್ನು ಬರ ಮಾಡಿಕೊಂಡು ಅಭಿನಂದಿಸಿದರು. ಈ ವೇಳೆ ಖಾರ್ವಿಕೆರಿ ಯುವ ಬ್ರಿಗೇಡ್‌ನ ಸದಸ್ಯರು ಸಂಪತ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದ ರೂವಾರಿ ಪತ್ರಕರ್ತ ಮಝರ್ ಕುಂದಾಪುರ ಹಾಜರಿದ್ದರು. ಹರ್ಷವರ್ಧ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.

ಅವಿರತ ಶ್ರಮದಿಂದು ಗುರಿ ಮುಟ್ಟಿ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಇದೇ ಸಾಧನೆಯನ್ನು ಸಮುದ್ರದಲ್ಲಿ ಮಾಡಬೇಕೆಂಬುದು ನನ್ನ ಆಶಯ. ಅದಕ್ಕಾಗಿ ಶ್ರಮ ವಹಿಸುತ್ತೇನೆ. ಅಲ್ಲದೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸುವುದು ನನ್ನ ಗುರಿಯಾಗಿದೆ.

-ಸಂಪತ್ ಡಿ.ಖಾರ್ವಿ, ಈಜುಪಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News