×
Ad

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ಡಿ.3ರವರೆಗೆ ಭಾರೀ ಮಳೆ ಸಾಧ್ಯತೆ- ಐಎಂಡಿ

Update: 2019-12-01 21:59 IST

ಮಂಗಳೂರು, ಡಿ.1: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆಯಲ್ಲಿ ಕಡಲ ನಗರಿ ಮಂಗಳೂರು ಸೇರಿದಂತೆ ವಿವಿಧೆಡೆ ರವಿವಾರ ಸಾಧಾರಣ ಮಳೆ ಸುರಿದಿದೆ.

ಚಳಿಗಾಲದಲ್ಲೂ ಬಿಸಿಲಿನ ಧಗೆಗೆ ಬೇಸತ್ತಿದ್ದ ಕರಾವಳಿಗರಿಗೆ ರವಿವಾರ ಸಂಜೆ ಸುರಿದ ಮಳೆಯಿಂದಾಗಿ ಕೆಲ ಹೊತ್ತು ನಿಟ್ಟುಸಿರು ಬಿಡುವಂತಾಗಿದೆ. ಸಂಜೆ 5 ಗಂಟೆಯಿಂದ ಆರಂಭವಾದ ತುಂತುರು ಮಳೆಯು ಕ್ರಮೇಣ ವೇಗ ಪಡೆಯುತ್ತಾ ಸಾಧಾರಣ ಮಳೆ ಸುರಿದಿದೆ.

ಉತ್ತರ ಕರ್ನಾಟಕದಲ್ಲಿ ಚಳಿಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೆ ಕರಾವಳಿ ಭಾಗದಲ್ಲಿ ಮಾತ್ರ ಬೇಸಿಗೆ ಅನುಭವವಾ ಗುತ್ತಿತ್ತು. ಸಂಜೆಯಿಂದ ಆರಂಭವಾದ ಮಳೆಯು ತಡರಾತ್ರಿವರೆಗೂ ಮುಂದುವರಿದಿತ್ತು. ಇದೇ ಸ್ಥಿತಿ ಇನ್ನೂ ಮೂರು-ನಾಲ್ಕು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಅರಬ್ಬಿ ಸಮುದ್ರದ ಆಗ್ನೇಯ ಭಾಗ ಸೇರಿದಂತೆ ಲಕ್ಷದ್ವೀಪ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಕ್ರಮೇಣವಾಗಿ ಪೂರ್ವ ಮಧ್ಯ ಅರಬ್ಬಿ ಸಮುದ್ರದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಇದೇ ಹವಾಮಾನವು ಮುಂದಿನ ಮೂರು-ನಾಲ್ಕು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ ಇಲಾಖೆ ತಿಳಿಸಿದೆ.

ಭಾರೀ ಮಳೆ: ಅರಬ್ಬಿ ಸಮದ್ರದ ಪೂರ್ವ ಕೇಂದ್ರ, ಲಕ್ಷದ್ವೀಪ, ಕೇರಳ, ಕರ್ನಾಟಕದ ಕರಾವಳಿಯ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಯುಭಾರ ಕುಸಿತದಿಂದ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಿ.3ರವರೆಗೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಕಡಲು ಪ್ರಕ್ಷುಬ್ಧಗೊಳ್ಳು ಸಾಧ್ಯತೆ ಹೆಚ್ಚಿದೆ. ಕಡಲಲ್ಲಿ ಗಂಟೆಗೆ 40 ಕಿ.ಮೀ. ವೇಗದಿಂದ 50 ಕಿ.ಮೀ.ವರೆಗೆ ಬಿರುಗಾಳಿ ಬೀಸಲಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗ, ಮಾಲ್ಡೀವ್ಸ್, ಕೇರಳ, ತಮಿಳುನಾಡು, ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ದಿನಗಳಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News