ದರ್ಗಾ ಆಡಳಿತಾಧಿಕಾರಿ ವಿರುದ್ಧ ಉಳ್ಳಾಲ ಜಮಾಅತ್ ಸಂರಕ್ಷಣಾ ಸಮಿತಿಯಿಂದ ಹಕ್ಕೊತ್ತಾಯ

Update: 2019-12-01 17:11 GMT

ಉಳ್ಳಾಲ : ಅಧಿಕಾರಿದಲ್ಲಿದ್ದ ವೇಳೆ  ಭ್ರಷ್ಟಾಚಾರದ ಪಟ್ಟಿಯಲ್ಲಿ ಸೇರಿ ವಜಾಗೊಂಡಿದ್ದ ಅಧಿಕಾರಿಯನ್ನು ಉಳ್ಳಾಲ ದರ್ಗಾದ ಆಡಳಿತಾಧಿಕಾರಿಯನ್ನಾಗಿ ಸರ್ಕಾರ ನೇಮಕ ಮಾಡಿದ್ದರಿಂದ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಸಂಸ್ಥೆಗಳ ಬಗ್ಗೆ ಉಳ್ಳಾಲದ ಜನರಲ್ಲಿ ಆತಂಕದ ಮನೆ ಮಾಡಿದೆ ಎಂದು ಸಾಮಾಜಿಕ ಮುಖಂಡ ಫಾರೂಕ್ ಉಳ್ಳಾಲ್ ಖೇದ ವ್ಯಕ್ತಪಡಿಸಿದರು.

ದರ್ಗಾ ಆಡಳಿತಾಧಿಕಾರಿ ನೇಮಕದ ವಿರುದ್ಧ ಉಳ್ಳಾಲ ಜಮಾಅತ್ ಸಂರಕ್ಷಣಾ ಸಮಿತಿಯಿಂದ ರವಿವಾರ ಉಳ್ಳಾಲ  ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದ ಬೃಹತ್ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತನ್ನದೇ ಆದ ಇತಿಹಾಸವಿರುವ ಉಳ್ಳಾಲ ದರ್ಗಾ  ದ.ಕ. ಜಿಲ್ಲೆಯಲ್ಲಿ ಸರ್ವಧರ್ಮ ಸಮನ್ವಯತೆಯ ಕೇಂದ್ರವಾಗಿದ್ದು,  ಕಳೆದ ಮೂರುವರೆ ವರ್ಷಗಳಿಂದ ಅಬ್ದುಲ್ ರಶೀದ್ ನೇತೃತ್ವದಲ್ಲಿ ಉಳ್ಳಾಲದ ವಿವಿಧ ಮೊಹಲ್ಲಾಗಳ 55 ಪ್ರತಿನಿಧಿಗಳನ್ನು ನೇಮಕ ಮಾಡಿದ್ದಾರೆ. ಇದೀಗ ಅಧಿಕಾರ ದಲ್ಲಿದ್ದಾಗ ಭ್ರಷ್ಟಾಚಾರ ನಡೆಸಿ ವಜಾಗೊಂಡ ನಿವೃತ್ತ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕ‌ ಮಾಡಿರುವುದು, ಉಳ್ಳಾಲದ ಸರ್ವ ಧರ್ಮೀಯರಲ್ಲೂ  ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜನರ ನೋವಿಗೆ ಸ್ಪಂದಿಸಿ ಹಕ್ಕೊತ್ತಾಯ ಸಭೆ ನಡೆಸಲಾಗಿದೆ.  ಜನರ ನೋವನ್ನು ಮುಖ್ಯಮಂತ್ರಿ, ಸಂಸದರು, ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು  ಅರ್ಥಮಾಡಿಕೊಂಡು ಆಡಳಿತಾಧಿಕಾರಿಯನ್ನು ತಕ್ಷಣ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಬಳಿಕ ಉಳ್ಳಾಲ ಠಾಣೆಯ ಎಸ್.ಐ. ಜಿ.ವಿ.ಕಾಂತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉಳ್ಳಾಲ ಜಮಾಅತ್ ಸಂರಕ್ಷಣಾ ಸಮಿತಿ ಸಂಚಾಲಕ ಯು.ಎಚ್.ಅಲ್ತಾಫ್ ಹಳೆಕೋಟೆ, ಪ್ರಮುಖರಾದ ಎ.ಕೆ.ಮೊಯಿದ್ದೀನ್,  ಅಯೂಬ್ ಮಂಚಿಲ, ಹಮೀದ್, ಮುಸ್ತಫಾ ಅಬ್ದುಲ್ಲಾ, ಅಬ್ಬಾಸ್ ಕೋಟೆಪುರ, ಯು.ಕೆ.ಮುಸ್ತಫಾ ಎವರೆಸ್ಟ್, ಅಮೀರ್ ಹಾಜಿ, ಆಸಿಫ್ ಅಬ್ದುಲ್ಲಾ, ನಗರಸಭಾ ಮಾಜಿ ಅಧ್ಯಕ್ಷ ಹುಸೈನ್ ಕುಂಞಿಮೋನು, ಸದಸ್ಯ ಬಶೀರ್, ಅಬ್ಬಾಸ್ ಕೆನರಾ, ಜಮಾಲಿಯ ಖಾದರ್, ಮುಹಿಯುದ್ದೀನ್ ಪೇಟೆ, ಅಶ್ರಫ್ ಕೋಟೆಪುರ, ಇಲ್ಯಾಸ್ ಹಾಜಬ್ಬ, ನಝೀರ್ ಕೋಟೆಪುರ, ಇಮ್ತಿಯಾಝ್ ಕೋಡಿ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News