ಕದನ ವಿರಾಮ: ಅಮೆರಿಕದ ಪ್ರಸ್ತಾವ ಸ್ವೀಕರಿಸಲು ತಾಲಿಬಾನ್‌ಗೆ ಅಫ್ಘಾನ್ ಕರೆ
ಕಾಬುಲ್, ಡಿ.1: ಬಂಡುಕೋರರು ಹಾಗೂ ಅಪ್ಘಾನ್ ಸರಕಾರದ ನಡುವೆ ನೇರ ಮಾತುಕತೆ ನಡೆಯಲು ದಾರಿ ಮಾಡಿಕೊಡುವುದಕ್ಕಾಗಿ ಕದನವಿರಾಮ ಒಪ್ಪಂದವನ್ನು ಏರ್ಪಡಿಸುವ ಅಮೆರಿಕದ ಪ್ರಸ್ತಾವವನ್ನು ತಾಲಿಬಾನ್ ಒಪ್ಪಿಕೊಳ್ಳಬೇಕೆಂದು ಅಫ್ಘಾನ್ ಅಧ್ಯಕ್ಷ ಮುಹಮ್ಮದ್ ಘನಿ ಅವರ ವಕ್ತಾರ ಸಾದಿಕ್ ಸಿದ್ದೀಕಿ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಬಗ್ರಾಮ್ ವಾಯುನೆಲೆಗೆ ಹಠಾತ್ ಭೇಟಿ ನೀಡಿದ ಸಂದರ್ಭದಲ್ಲಿ ಅಫ್ಘಾನ್ ಸರಕಾರ ಹಾಗೂ ಬಂಡುಕೋರರ ನಡುವೆ ಕದನವಿರಾಮ ಏರ್ಪಡುವಂತೆ ಕರೆ ನೀಡಿದ್ದರು.
ಕದನವಿರಾಮ ಏರ್ಪಡಿಸುವ ಅಮೆರಿಕದ ಪ್ರಸ್ತಾವನ್ನು ತಾಲಿಬಾನ್ ಸ್ವೀಕರಿಸುವುದೆಂಬ ಭರವಸೆ ನಮಗಿದೆ. ಒಂದು ವೇಳೆ ಅವರಿಗೆ ನಿಜಕ್ಕೂ ಯುದ್ಧವನ್ನು ಕೈಬಿಡಬೇಕೆಂದಿದ್ದರೆ, ಕದನವಿರಾಮ ಅವಕಾಶವನ್ನು ಒಪ್ಪಿಕೊಳ್ಳುವುದೇ ಅವರಿಗಿರುವ ಉತ್ತಮ ಅವಕಾಶವಾಗಿದೆ’’ ಎಂದು ಸಿದ್ದೀಕಿ ಹೇಳಿರುವುದಾಗಿ ಟೊಲೊ ನ್ಯೂಸ್ ವರದಿ ಮಾಡಿದೆ.
ಈ ಮಧ್ಯೆ ತಾಲಿಬಾನ್‌ನ ಮಾಜಿ ಸದಸ್ಯನೊಬ್ಬ ಹೇಳಿಕೆಯನ್ನು ನೀಡಿ, ಅಮೆರಿಕದ ಜೊತೆ ಶಾಂತಿ ಒಡಂಬಡಿಕೆಗೆ ತಾಲಿಬಾನ್ ಸಹಿಹಾಕುವವರೆಗೆ ಅದು ಅಫ್ಘಾನ್ ಸರಕಾರದ ಜೊತೆ ಕದನವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳುವುದಿಲ್ಲ’’ ಎಂದು ತಿಳಿಸಿದ್ದಾರೆ.
‘ಮೊದಲು ಅಮೆರಿಕದ ಜೊತೆಗಿನ ಶಾಂತಿ ಒಪ್ಪಂದಕ್ಕೆ ಸಹಿಹಾಕಬೇಕಾಗಿದೆ. ಆನಂತರವೇ ಕದನವಿರಾಮವನ್ನು ಘೋಷಿಸಲಾಗುವುದು. ಮೊದಲು ವಿಶ್ವಾಸವನ್ನು ರೂಪಿಸಿಕೊಳ್ಳುವ ಬಗ್ಗೆ ಅಮೆರಿಕದಿಂದ ಖಾತರಿಪಡಿಸಿಕೊಂಡ ಬಳಿಕವಷ್ಟೇ ಕದನವಿರಾಮ ಘೋಷಿಸುವುದು ತಾಲಿಬಾನ್‌ನ ಈ ನಿಲುವಿನ ಹಿಂದಿರುವ ರಹಸ್ಯವಾಗಿದೆಯೆಂದು ತಾಲಿಬಾನ್‌ನ ಮಾಜಿ ಸದಸ್ಯ ಮೌಲಾನಾ ಜಲಾಲುದ್ದೀನ್ ಶಿನ್ವಾರಿ ತಿಳಿಸಿದ್ದಾರೆ.