ಟ್ವಿಟರ್ ಪ್ರೊಫೈಲ್‍ ನಿಂದ 'ಬಿಜೆಪಿ'ಯನ್ನು ತೆಗೆದು ಹಾಕಿದ ಪಕ್ಷದ ಪ್ರಮುಖ ನಾಯಕಿ

Update: 2019-12-02 09:58 GMT

ಮುಂಬೈ: ಬಿಜೆಪಿ ನಾಯಕಿ ಹಾಗೂ ಮಾಜಿ ಸಚಿವೆ ಪಂಕಜಾ ಮುಂಢೆ ತಮ್ಮ ಟ್ವಿಟರ್ ಪ್ರೊಫೈಲ್‍ ನಿಂದ ಪಕ್ಷದ ಹೆಸರನ್ನು ತೆಗೆದು ಹಾಕಿ ಅಚ್ಚರಿ ಮೂಡಿಸಿದ್ದಾರೆ.

ತಮ್ಮ ತಂದೆ, ಮಾಜಿ ಕೇಂದ್ರ ಸಚಿವ ದಿವಂಗತ ಗೋಪಿನಾಥ್ ಮುಂಡೆ ಅವರ ಜನ್ಮದಿನಾಚರಣೆಗಾಗಿ ಡಿಸೆಂಬರ್ 12ರಂದು ಬೀಡ್ ಗೆ ರ್ಯಾಲಿಯೊಂದರಲ್ಲಿ ಭಾಗವಹಿಸಲು ಆಗಮಿಸುವಂತೆ ಮುಂಢೆ ರವಿವಾರ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

"ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಲಿನ ನಂತರ ಭೇಟಿಯಾಗುವಂತೆ ಬೆಂಬಲಿಗರಿಂದ ಹಲವಾರು ಕರೆಗಳು ಹಾಗೂ ಸಂದೇಶಗಳು ಬಂದಿದ್ದರೂ ರಾಜ್ಯದಲ್ಲಿ ಪರಿಸ್ಥಿತಿಯಿಂದ ಸಾಧ್ಯವಾಗಿರಲಿಲ್ಲ" ಎಂದು ಫೇಸ್ ಬುಕ್‍ನಲ್ಲಿ ಭಾವನಾತ್ಮಕ ಪೋಸ್ಟ್ ಒಂದರಲ್ಲಿ ಅವರು ಬರೆದಿದ್ದಾರೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂದಿನ ಕ್ರಮದ ಕುರಿತು ನಿರ್ಧರಿಸಬೇಕಿದೆ ಎಂದು ಬರೆದಿರುವ ಅವರು "ನೀವು ನನ್ನಲ್ಲಿ ಸಮಯಕ್ಕಾಗಿ ಕೇಳುತ್ತಿದ್ದೀರಿ. ನಾನು ನಿಮಗೆ 8ರಿಂದ 10 ದಿನ ನೀಡುತ್ತೇನೆ.  ಮುಂದೇನು ಮಾಡಬೇಕು, ಎತ್ತ ಸಾಗಬೇಕು, ಜನರಿಗೆ ನಾವೇನು ಮಾಡಬಹುದು, ಜನರೇನು ನಿರೀಕ್ಷಿಸುತ್ತಾರೆ ಎಂದು ನಾವು ಆತ್ಮಾವಲೋಕನ ಮಾಡಬೇಕು'' ಎಂದು ಮರಾಠಿಯಲ್ಲಿ ಪಂಕಜಾ ಮುಂಢೆ ಬರೆದಿದ್ದಾರೆ.

ಇತ್ತೀಚಿಗಿನ ವಿಧಾನಸಭಾ ಚುನಾವಣೆಯಲ್ಲಿ ಆಕೆ ತಮ್ಮ ಕುಟುಂಬದ ಭದ್ರಕೋಟೆ ಪರ್ಲಿ ಕ್ಷೇತ್ರದಲ್ಲಿ ಎನ್‍ಸಿಪಿಯ ಧನಂಜಯ್ ಪಂಡಿತ್‍ ರಾವ್ ಮುಂಢೆ ಎದುರು ಸುಮಾರು 30,000 ಮತಗಳ ಅಂತರದಿಂದ ಸೋಲುಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News