'ಹನಿಟ್ರ್ಯಾಪ್' ಹಗರಣದ ಫೋಟೋ ಪ್ರಕಟಿಸಿದ ಪತ್ರಿಕೆ ಕಚೇರಿ ಸೀಲ್ ಮಾಡಿದ ಪೊಲೀಸರು

Update: 2019-12-02 11:36 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಇಂದೋರ್ ಮೂಲದ ಸಂಜೆ ಪತ್ರಿಕೆ ಸಂಝಾ ಲೋಕಸ್ವಾಮಿ ಕಚೇರಿ ಮೇಲೆ ದಾಳಿ ನಡೆಸಿರುವ ಮಧ್ಯ ಪ್ರದೇಶ ಪೊಲೀಸರು ಪತ್ರಿಕೆಯ ಕಚೇರಿ ಹಾಗೂ ಪ್ರಿಂಟಿಂಗ್ ಪ್ರೆಸ್ ಸೀಲ್ ಮಾಡಿದ್ದಾರೆ.

ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿತೇಂದ್ರ ಸೋನಿ ಮಾಲಕತ್ವದ ಪತ್ರಿಕೆಯಲ್ಲಿ ಇತ್ತೀಚೆಗೆ ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರಕಾರದಲ್ಲಿನ ಮಾಜಿ ಬಿಜೆಪಿ ಸಚಿವರೊಬ್ಬರು ಹಾಗೂ ಮಾಜಿ ಸಿಎಂ ಸಮೀಪವರ್ತಿಯೆನ್ನಲಾದ ರಾಜ್ಯದ ಮುಖ್ಯ ಕಾರ್ಯದರ್ಶಿ ಕೆಲ ಮಹಿಳೆಯರ ಜತೆಗಿರುವ ಫೋಟೋಗಳನ್ನು ಪ್ರಕಟಿಸಿತ್ತಲ್ಲದೆ ವೀಡಿಯೋ ಕ್ಲಿಪ್ ಗಳನ್ನೂ ಯುಟ್ಯೂಬ್ ನಲ್ಲಿ ಬಿಡುಗಡೆಗೊಳಿಸಿತ್ತು.

ಪತ್ರಿಕೆಯ ಕಚೇರಿಯ ಹೊರತಾಗಿ ಜಿತೇಂದ್ರ ಸೋನಿ ಒಡೆತನದ ರೆಸ್ಟಾರೆಂಟ್, ಡ್ಯಾನ್ಸ್ ಬಾರ್ ಹಾಗೂ ಪಬ್ ಮೇಲೂ ದಾಳಿ ನಡೆಸಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ಬಹಿರಂಗಗೊಂಡ ಹನಿ ಟ್ರ್ಯಾಪ್ ಹಗರಣಕ್ಕೂ ಈ ಘಟನೆಗೂ ಸಂಬಂಧವಿರುವುದರಿಂದ ಪತ್ರಿಕೆಯ ಕಚೇರಿಗೆ ಸೀಲ್ ಮಾಡಿರುವುದಕ್ಕೆ ಸ್ಥಳೀಯ ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ.

ಹಿರಿಯ ಅಧಿಕಾರಿಗಳು, ರಾಜಕಾರಣಿಗಳನ್ನು ಹಾಗೂ ಉದ್ಯಮಿಗಳನ್ನು ಬ್ಲ್ಯಾಕ್ಮೇಲ್‍ಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತ್ತೀಚೆಗೆ ಐವರು ಮಹಿಳೆಯರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News