ವಾಯುಭಾರ ಕುಸಿತ: ಚಂಡಮಾರುತವಾಗಿ ಪರಿವರ್ತನೆ

Update: 2019-12-02 14:39 GMT

ಮಂಗಳೂರು, ಡಿ.2: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ನಗರದಲ್ಲಿ ರವಿವಾರ ಆರಂಭವಾದ ಅಕಾಲಿಕ ಮಳೆಯು ಸೋಮವಾರವೂ ಮುಂದುವರಿದಿದೆ. ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಡುವು ಕೊಟ್ಟಿದ್ದ ಮಳೆಯು ಸಂಜೆ ಮತ್ತೆ ಮಳೆಯ ಸಿಂಚನ ಶುರುವಾಗಿದೆ.

ವಾಯುಭಾರ ಕುಸಿತವು ಅರಬ್ಬಿ ಸಮುದ್ರದಲ್ಲಿ ಮತ್ತಷ್ಟು ಕೇಂದ್ರೀಕರಿಸುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ಇದೇ ವಾತಾವರಣ ಇರಲಿದೆ. ನಂತರ 48 ಗಂಟೆಯ ಸಮಯದಲ್ಲಿ ಕ್ರಮೇಣ ಇದು ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಕಡಲು ತೀವ್ರವಾಗಿ ಪ್ರಕ್ಷುಬ್ಧಗೊಳ್ಳಲಿದೆ. ಮುಂದಿನ 72 ಗಂಟೆಗಳಲ್ಲಿ ಚಂಡಮಾರುತವು ಪಶ್ಚಿಮ-ವಾಯವ್ಯ ದಿಕ್ಕಿನಿಂದ ಸೋಮಾಲಿಯ ಕರಾವಳಿಯತ್ತ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕಡಲಲ್ಲಿ ಉಂಟಾದ ಪ್ರತಿಕೂಲ ವಾತಾವರಣದಿಂದಾಗಿ ಲಕ್ಷದ್ವೀಪ, ಕೇರಳ, ತಮಿಳುನಾಡು, ಪದುಚೆರಿ ಸೇರಿದಂತೆ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಧಾರಣ ಮಳೆ ಸುರಿಯುತ್ತಾ, ಕ್ರಮೇಣ ವೇಗ ಪಡೆಯಲಿದೆ. ಈ ಭಾಗದಲ್ಲಿ ಅತಿಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಕಡಲಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಇದು ಗಂಟೆಗೆ 60 ಕಿ.ಮೀ. ವೇಗ ಪಡೆಯಲಿದೆ. ಈ ಸ್ಥಿತಿಯು ಡಿ.6ರವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News