ಪರಿಸರದ ವಿರುದ್ಧದ ನಮ್ಮ ಹೋರಾಟವನ್ನು ನಿಲ್ಲಿಸಬೇಕು

Update: 2019-12-02 15:11 GMT
                                 ಫೊಟೊ ಕೃಪೆ:  IANS

ಮ್ಯಾಡ್ರಿಡ್ (ಸ್ಪೇನ್), ಡಿ. 2: ಮಾನವ ಕುಲಕ್ಕೇ ಬೆದರಿಕೆಯಾಗಿರುವ ಜಾಗತಿಕ ತಾಪಮಾನದ ವಿನಾಶಕಾರಿ ಪರಿಣಾಮಗಳು, ಆಕ್ರಮಣಕ್ಕೊಳಗಾಗುತ್ತಿರುವ ಪ್ರಕೃತಿಯ ಪ್ರತಿರೋಧವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ರವಿವಾರ ಎಚ್ಚರಿಸಿದ್ದಾರೆ.

ಸೋಮವಾರ ಸ್ಪೇನ್‌ನ ಮ್ಯಾಡ್ರಿಡ್ ನಗರದಲ್ಲಿ ಆರಂಭವಾಗಿರುವ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದ ಮುನ್ನಾ ದಿನ ವಿಶ್ವಸಂಸ್ಥೆಯ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ‘ಸಿಒಪಿ25 ಹವಾಮಾನ ಬದಲಾವಣೆ’ ಸಮ್ಮೇಳನದಲ್ಲಿ 196 ದೇಶಗಳು ಭಾಗವಹಿಸುತ್ತಿವೆ.

‘‘ಹಲವು ದಶಕಗಳಿಂದ ಮಾನವ ಪ್ರಭೇದಗಳು ಭೂಮಿಯ ವಿರುದ್ಧ ಯುದ್ಧದಲ್ಲಿ ತೊಡಗಿವೆ. ಈಗ ಭೂಮಿ ಪ್ರತಿ ಹೋರಾಟ ನೀಡುತ್ತಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣವಾದ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಪ್ರಮಾಣವನ್ನು ನಿಯಂತ್ರಿಸಲು ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳು ಮಾಡುತ್ತಿರುವ ಪ್ರಯತ್ನಗಳು ‘‘ಏನೇನೂ ಸಾಕಾಗುವುದಿಲ್ಲ’’ ಎಂದು ಅವರು ಹೇಳಿದರು.

‘‘ಪರಿಸರದ ವಿರುದ್ಧ ನಾವು ಮಾಡುತ್ತಿರುವ ಹೋರಾಟವನ್ನು ನಿಲ್ಲಿಸಬೇಕು. ಇದು ಸಾಧ್ಯ ಎಂದು ವಿಜ್ಞಾನ ನಮಗೆ ಹೇಳುತ್ತದೆ’’ ಎಂದರು.

ಕಳೆದ ಐದು ವರ್ಷಗಳು ದಾಖಲೆಯಲ್ಲಿರುವ ಅತ್ಯಂತ ಬಿಸಿ ಅವಧಿ ಹಾಗೂ 2019 ಸಂಭಾವ್ಯ ಎರಡನೇ ಅತ್ಯಂತ ಬಿಸಿ ವರ್ಷ ಎನ್ನುವುದನ್ನು ಸಾಬೀತುಪಡಿಸುವ ವಿಶ್ವಸಂಸ್ಥೆಯ ವರದಿಯೊಂದು ಇನ್ನು ಕೆಲವೇ ದಿನಗಳಲ್ಲಿ ಪರಿಸರ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ ಎಂದು ಗುಟೆರಸ್ ತಿಳಿಸಿದರು.

‘‘ಪರಿಸರ ಸಂಬಂಧಿ ವಿಪತ್ತುಗಳು ಹೆಚ್ಚೆಚ್ಚು ನಡೆಯುತ್ತಿವೆ ಹಾಗೂ ಹೆಚ್ಚೆಚ್ಚು ಮಾರಕ ಮತ್ತು ವಿನಾಶಕಾರಕವಾಗುತ್ತಿವೆ’’ ಎಂದು ಅವರು ಹೇಳಿದರು.

ಪ್ರತಿ ವರ್ಷ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಾಯುಮಾಲಿನ್ಯದಿಂದಾಗಿ 70 ಲಕ್ಷ ಮಂದಿ ಸಾಯುತ್ತಿದ್ದಾರೆ ಎಂದು ಹೇಳಿದ ಅವರು, ಮಾನವ ಆರೋಗ್ಯ ಮತ್ತು ಆಹಾರ ಭದ್ರತೆ ಅಪಾಯದಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News