ಅವರಿಗೆ ಶೀಘ್ರ ನ್ಯಾಯ ಸಿಗಬೇಕು: ಪಶುವೈದ್ಯೆ ಅತ್ಯಾಚಾರ, ಹತ್ಯೆ ಕುರಿತು ನಿರ್ಭಯಾ ತಾಯಿ

Update: 2019-12-02 16:25 GMT

ಹೊಸದಿಲ್ಲಿ, ಡಿ. 2: ಹೈದರಾಬಾದ್‌ನ ಸಮೀಪ ನಡೆದ 26 ವರ್ಷದ ಪಶುವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಅನಾಗರಿಕ ಕೃತ್ಯ ಎಂದು ಹೊಸದಿಲ್ಲಿಯಲ್ಲಿ 2012 ಡಿಸೆಂಬರ್‌ನಲ್ಲಿ ಅತ್ಯಾಚಾರ ಹಾಗೂ ಹತ್ಯೆಗೀಡಾದ ಯುವತಿ ನಿರ್ಭಯಾ ಅವರ ತಾಯಿ ಹೇಳಿದ್ದಾರೆ.

ನಮ್ಮಂತೆ ಅವರು ನ್ಯಾಯಕ್ಕಾಗಿ 7 ವರ್ಷಗಳ ಹೋರಾಟ ನಡೆಸಬಾರದು. ಅವರಿಗೆ ಶೀಘ್ರ ನ್ಯಾಯ ಸಿಗಬೇಕು. ಇಂತಹ ಘಟನೆಗಳು ಮತ್ತೆ ಮತ್ತೆ ಯಾಕೆ ಸಂಭವಿಸುತ್ತವೆ ಎಂದು ಆಡಳಿತ ಪರಿಶೀಲನೆ ನಡೆಸಬೇಕು ಎಂದು ದಿಲ್ಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿಯ ತಾಯಿ ಆಶಾ ದೇವಿ ತಿಳಿಸಿದ್ದಾರೆ.

ಪ್ರಕರಣದಲ್ಲಿ ದೋಷಿಗಳೆಂದು ಪರಿಗಣಿತರಾಗಿರುವವರಲ್ಲಿ ಓರ್ವ ಸಲ್ಲಿಸಿದ ಕ್ಷಮಾದಾನದ ಅರ್ಜಿ ತಿರಸ್ಕರಿಸಲು ಆಪ್ ಸರಕಾರ ಶಿಫಾರಸು ಮಾಡಿರುವುದು ತನಗೆ ಸಂತಸ ಉಂಟು ಮಾಡಿದೆ ಎಂದು ಅವರು ಹೇಳಿದರು.

''ಪ್ರಕರಣದ ದೋಷಿಗಳಲ್ಲಿ ಓರ್ವನ ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಲು ದಿಲ್ಲಿ ಸರಕಾರ ಶಿಫಾರಸು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ. ದೋಷಿಗಳನ್ನು ಶೀಘ್ರ ಗಲ್ಲಿಗೇರುವ ಭರವಸೆ ತನಗಿದೆ'' ಎಂದರು.

2012 ಡಿಸೆಂಬರ್ 16ರಂದು 'ಲೈಫ್ ಆಫ್ ಪೈ' ಸಿನೆಮಾ ನೋಡಿ ಗೆಳೆಯನೊಂದಿಗೆ ಹಿಂದಿರುಗುತ್ತಿದ್ದಾಗ ಆರು ಮಂದಿ ನಿರ್ಭಯ ಅವರನ್ನು ಅತ್ಯಾಚಾರಗೈದಿದ್ದರು ಹಾಗೂ ಚಲಿಸುವ ಬಸ್ಸಿನಿಂದ ಹೊರಗೆ ಎಸೆದಿದ್ದರು. ಗಂಭೀರ ಗಾಯಗೊಂಡಿದ್ದ ಅವರು ಸಿಂಗಪುರದ ಆಸ್ಪತ್ರೆಯಲ್ಲಿ ಡಿಸೆಂಬರ್ 29ರಂದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News