ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಅಮಾನತು

Update: 2019-12-02 16:34 GMT

ಕುಂದಾಪುರ, ಡಿ. 2: ಕರ್ತವ್ಯ ಲೋಪ ಎಸಗಿರುವ ಕುರಿತ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಕಾರಿ ಡಾ.ರಾಬರ್ಟ್ ರೆಬೆಲ್ಲೋ ಅವರನ್ನು ಸೇವೆಯಿಂದ ಅಮಾನತು ಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಪಾಂಡೆ ಆದೇಶ ಹೊರಡಿಸಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿರುವ ನಂದಿಕೇಶ್ವರ ದೇವಸ್ಥಾನದ ಲೆಕ್ಕಪತ್ರಗಳಲ್ಲಿನ ಲೋಪದೋಷಗಳ ಬಗ್ಗೆ ಆ.28ರಂದು ನಡೆದ ಕುಂದಾಪುರ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ದೂರಿದ್ದರು. ದೇವಸ್ಥಾನದ ಹಿಂದಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ದೇವಸ್ಥಾನದ ಹಣದ ಖರ್ಚು ವೆಚ್ಚದ ಲೆಕ್ಕಪತ್ರವನ್ನು ಸರಿಯಾಗಿ ನಿರ್ವಹಿಸದೆ ಇರುವುದರಿಂದ ಹಣ ದುರುಪಯೋಗ ಮಾಡಿರುವ ಆರೋಪಕ್ಕೆ ಕಾರಣವಾಗಿತ್ತು.

ಈ ದೂರಿನ ಬಗ್ಗೆ ತಕ್ಷಣ ಕ್ರಮ ತೆಗೆದು ಕೊಂಡು ವರದಿಯನ್ನು ನೀಡುವಂತೆ ಡಾ. ರಾಬರ್ಟ್ ರೆಬೆಲ್ಲೊ ಅವರಿಗೆ ಎರಡು ಪತ್ರಗಳನ್ನು ಬರೆಯಲಾಗಿತ್ತು. ಈ ಬಗ್ಗೆ ವೈದ್ಯಾಧಿಕಾರಿ ಈವರೆಗೆ ಸರಿಯಾದ ಲೆಕ್ಕಪತ್ರವನ್ನು ನೀಡಿರುವುದಿಲ್ಲ. ಈ ಕುರಿತ ವರದಿ ನೀಡಲು ವಿಳಂಬ ಮತ್ತು ಜನಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಪತ್ರ ಬರೆದು ಅಮಾನತುಗೊಳಿಸುವಂತೆ ಸೂಚನೆ ನೀಡಿದ್ದರು.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಡಾ.ರಾಬರ್ಟ್ ರೆಬೆಲ್ಲೊ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವು ದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಶಿಸ್ತು ಕ್ರಮಕ್ಕೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಗೊಳಿಸಲಾಗಿದೆ ಎಂದು ಪಂಕಜ್ ಪಾಂಡೆ ಆದೇಶದಲ್ಲಿ ತಿಳಿಸಿದ್ದಾರೆ.

ಅಮಾನತಿನ ಅವಧಿಯಲ್ಲಿ ವೈದ್ಯರು ಜೀವನಾಂಶ ಭತ್ಯೆಯನ್ನು ಪಡೆಯುವ ಉದ್ದೇಶಕ್ಕಾಗಿ ಅವರ ಲೀನ್ (ಹುದ್ದೆಯ ಹಕ್ಕು)ನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಬದಲಾವಣೆ ಮಾಡಲಾಗಿದೆ. ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಇವರು ಕೇಂದ್ರ ಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News