ಘನತ್ಯಾಜ್ಯ ವಿಲೇವಾರಿ: ಪಾಲಿಕೆ ಒಪ್ಪಿದರೆ ತಜ್ಞರ ತಂಡ ರಚನೆ

Update: 2019-12-02 17:02 GMT

ಮಂಗಳೂರು, ಡಿ.2: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಮನವಿ ಸಲ್ಲಿಸಿದರೆ ಸಂಸ್ಥೆಯು ತಜ್ಞರ ತಂಡವನ್ನು ರಚಿಸಲಿದ್ದೇವೆ ಎಂದು ಬೆಲ್ಜಿಯಂ ಮೂಲದ ಫ್ಲಾಂಡರ್ಸ್ ಸಂಸ್ಥೆಯ ಬೆಂಗಳೂರು ಆಯುಕ್ತ ಜಯಂತ್ ನಾಡಿಗೇರ್ ತಿಳಿಸಿದ್ದಾರೆ.

ನಗರದ ಹೊರವಲಯ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕೆನರಾ ಸಣ್ಣ ಕೈಗಾರಿಕೆಗಳ ಸಂಘದ (ಕೆಎಸ್‌ಐಎ) ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ಸಂಸ್ಥೆಯಿಂದ ತಜ್ಞರ ತಂಡ ರಚಿಸಲಿದ್ದೇವೆ. ಘನತ್ಯಾಜ್ಯ ವಿಲೇವಾರಿಯನ್ನು ಸುಲಭವಾಗಿ ಹೇಗೆ ನಿರ್ವಹಣೆ ಮಾಡಬಹುದು ಎಂಬುದನ್ನು ತಂಡವು ಉಚಿತವಾಗಿ ಸಲಹೆ ನೀಡಿ, ವರದಿ ಸಲ್ಲಿಸಲಿದೆ. ಘನತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಹೋಗಲಾಡಿ ಸಲು ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಸಂಸ್ಥೆಯು ತಂತ್ರಜ್ಞಾನ, ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳ ರಫ್ತು ಉತ್ತೇಜಿಸುವ ಜವಾಬ್ದಾರಿ ಹೊಂದಿದೆ. ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳ ರಫ್ತು ಮಾಡುವ ಬಗ್ಗೆ ಸಲಹೆ ಸೂಚನೆಗಳನ್ನು ಸಂಸ್ಥೆ ನೀಡಲಿದೆ. ಸಂಶೋಧನೆ ಮತ್ತು ಆವಿಷ್ಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುತ್ತಿದೆ ಎಂದರು.

ಮಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಮನೆಯಲ್ಲಿ ಮೇಣದ ಬತ್ತಿ ತಯಾರಿಸುವುದು ಸೇರಿದಂತೆ ಗೃಹ ಕುಶಲ ವೃತ್ತಿಗೆ ಪ್ರಾಧಾನ್ಯತೆ ನೀಡಲಾಗುವುದು. ಅಂತಹ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಲಹೆ-ಸೂಚನೆ, ಸಹಕಾರ ಕಲ್ಪಿಸಲಿ ದ್ದೇವೆ. ಅಲ್ಲದೆ, ಆಹಾರ, ಆರೋಗ್ಯ ರಕ್ಷಣೆ ವಿಭಾಗದಲ್ಲೂ ಸಂಸ್ಥೆ ಅಪಾರ ಅನುಭವ ಹೊಂದಿದೆ ಎಂದು ಮಾಹಿತಿ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಕೆಎಸ್‌ಐಎ ಗೌತಮ್ ಹೆಗ್ಡೆ, ಅಜಿತ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News