ಸೋನಿಯಾ- ಉದ್ಧವ್ ಠಾಕ್ರೆ ನಿಕಟವಾದ್ದು ಹೇಗೆ ಗೊತ್ತೇ ?

Update: 2019-12-03 03:54 GMT

ಮುಂಬೈ: ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಬಗೆಗಿನ ಕುತೂಹಲ ಮುಂದುವರಿದಿರುವಂತೆಯೇ, ಎನ್‌ಸಿಪಿ ಮುಖಂಡ ಶರದ್ ಪವಾರ್ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

"ರಾಜಕೀಯವಾಗಿ ಜತೆಯಾಗಿ ಸಾಗೋಣ" ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿಕೊಂಡ ಮನವಿಯನ್ನು ನಯವಾಗಿ ತಿರಸ್ಕರಿಸಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯವರನ್ನು ಜತೆ ಸೇರಿಸಿದ್ದಾಗಿ ಪವಾರ್ ಹೇಳಿದ್ದಾರೆ.

"ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನವೆಂಬರ್ 20ರಂದು ಮೋದಿಯವರನ್ನು ಭೇಟಿ ಮಾಡಿದ್ದೆ. ಅಕಾಲಿಕ ಮಳೆಯಿಂದ ಹಾನಿಗೀಡಾದ ರೈತರ ವಿಷಯವಾಗಿ ಚರ್ಚಿಸಿದೆ. ಚರ್ಚೆ ಪೂರ್ಣವಾದ ಬಳಿಕ ಮೋದಿ ಮತ್ತೆ ನನ್ನನ್ನು ಕರೆದು, ನಾವು ಜತೆಯಾಗಿ ಕಾರ್ಯನಿರ್ವಹಿಸುವುದಾದರೆ ಅತೀವ ಸಂತಸ ತರುವ ವಿಚಾರ ಎಂದು ಹೇಳಿದರು. ಆದರೆ ನಾನು ಆ ಆಫರ್ ತಿರಸ್ಕರಿಸಿದೆ. ನಮ್ಮ ವೈಯಕ್ತಿಕ ಸಂಬಂಧ ಅದ್ಭುತ. ಭವಿಷ್ಯದಲ್ಲೂ ಅದು ಹಾಗೆಯೇ ಮುಂದುವರಿಯಲಿ. ಆದರೆ ರಾಜಕೀಯವಾಗಿ ಅದು ಅನುಕೂಲಕರವಲ್ಲ ಎಂದು ತಿರಸ್ಕರಿಸಿದೆ" ಎಂದು ಎಬಿಪಿ ಮಝಾ ಎಂಬ ಮರಾಠಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪವಾರ್ ವಿವರಿಸಿದ್ದಾರೆ.

ಶಿವಸೇನೆ ಮತ್ತು ಕಾಂಗ್ರೆಸ್ ಜತೆಗಿನ ಮಾತುಕತೆ, ಅಜಿತ್ ಪವಾರ್ ಬಂಡಾಯದ ಬಾವುಟ ಹಾರಿಸಿದ್ದು, ಸಿಎಂ ಹುದ್ದೆ ಸ್ವೀಕರಿಸುವಂತೆ ಠಾಕ್ರೆಯವರ ಮನವೊಲಿಸಿದ್ದು ಮತ್ತಿತರ ಅಂಶಗಳ ಬಗ್ಗೆ ಹಿರಿಯ ಮುತ್ಸದ್ಧಿ ಮಾತನಾಡಿದರು. ತ್ರಿಪಕ್ಷ ಮೈತ್ರಿ ಅಂತಿಮ ಹಂತದಲ್ಲಿದ್ದಾಗ ಪವಾರ್ ಅವರು ಮೋದಿಯವರನ್ನು ಭೇಟಿಯಾದದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕೆಲ ಕಾಂಗ್ರೆಸ್ ಮುಖಂಡರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.

ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಶಿವಸೇನೆ ಜತೆ ಕೈಜೋಡಿಸುವ ಅನಿವಾರ್ಯತೆಯನ್ನು ಸೋನಿಯಾ ಗಾಂಧಿಯವರಿಗೆ ಮನವರಿಕೆ ಮಾಡಲು ಸುಧೀರ್ಘ ಮಾತುಕತೆ ನಡೆಸಬೇಕಾಯಿತು ಎಂದೂ ಪವಾರ್ ಹೇಳಿದ್ದಾರೆ. ಬಾಳ್ ಠಾಕ್ರೆಯವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮತ್ತು ರಾಜ್ಯದಲ್ಲಿ ಹಲವು ಚುನಾವಣೆಗಳಲ್ಲಿ ಇಂದಿರಾಗಾಂಧಿಯವರನ್ನು ಬೆಂಬಲಿಸಿದ್ದರು ಎನ್ನುವುದನ್ನು ಅವರಿಗೆ ನೆನಪಿಸಿದ್ದಾಗಿಯೂ ಪವಾರ್ ಬಹಿರಂಗಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News