ತುಳು ಸಿನೆಮಾಗಳಿಗೆ ಥಿಯೇಟರ್‌ಗಳ ಕೊರತೆ ನೀಗಬೇಕಿದೆ: ಯುವ ನಟ ಅರ್ಜುನ್ ಕಾಪಿಕಾಡ್

Update: 2019-12-03 06:56 GMT

ತುಳು ಚಿತ್ರರಂಗ ಹಲವು ಯುವ, ಪ್ರತಿಭಾನ್ವಿತ ನಟರನ್ನು ಸಿನಿಲೋಕಕ್ಕೆ ಪರಿಚಯಿಸಿದೆ. ತುಳುವಿನ ಹಲವು ಯುವನಟರು ಇಂದು ಬೇಡಿಕೆಯ ನಟರಾಗಿದ್ದಾರೆ. ತುಳು ಸಿನೆಮಾಗಳು ಕೂಡಾ ಒಂದರ ಮೇಲೊಂದರಂತೆ ಸೂಪರ್ ಹಿಟ್ ಚಿತ್ರಗಳಾಗಿ ಪ್ರೇಕ್ಷಕರ ಮನಗೆದ್ದಿವೆ. ಅದರಲ್ಲಿ ಒಂದು ಸದ್ಯ ಮಲ್ಟಿಪ್ಲೆಕ್ಸ್‌ಗಳಲ್ಲಿ 25 ದಿನಗಳನ್ನು ಪೂರೈಸಿ ಪ್ರದರ್ಶನ ಕಾಣುತ್ತಿರುವ ‘ಜಬರ್‌ದಸ್ತ್ ಶಂಕರ’. ತುಳು ಹಾಸ್ಯನಟ ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್‌ರ ಪುತ್ರ ಅರ್ಜುನ್ ಕಾಪಿಕಾಡ್ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಆಕರ್ಷಕ ಮೈಕಟ್ಟು, ನಟನೆಯ ಮೂಲಕ ಮಿಂಚುತ್ತಿರುವ ನಗು ಮೊಗದ ಅರ್ಜುನ್ ಕಾಪಿಕಾಡ್‌ರ ಮುಂದಿನ ಚಿತ್ರ ‘ರಾಹುಕಾಲ ಗುಳಿಗಕಾಲ’ ಶೀಘ್ರವೇ ತೆರೆ ಕಾಣಲಿದೆ. ಈ ಸಂದರ್ಭ ಅವರ ಜತೆ ‘ವಾರ್ತಾಭಾರತಿ’ ನಡೆಸಿದ ಕಿರು ಸಂದರ್ಶನ ಇಲ್ಲಿದೆ.

► ತುಳು ಚಿತ್ರರಂಗದಲ್ಲಿ ಯುವ ನಟರಿಗೆ ಬೇಡಿಕೆ ಹೇಗಿದೆ?

ತುಳು ಚಿತ್ರರಂಗವೇ ವಿಭಿನ್ನ. ಇಲ್ಲಿ ರಂಗಭೂಮಿಯ ಹಿನ್ನೆಲೆ ಬಹುತೇಕವಾಗಿ ಪ್ರಮುಖವಾಗಿದೆ. ನಮ್ಮ ನಾಟಕರಂಗ ಹಾಸ್ಯ ಪ್ರಧಾನ ಹಾಗೂ ಹಾಸ್ಯ ಹಿನ್ನೆಲೆಯಿಂದ ಕೂಡಿರುವಂತದ್ದು. ಆದರೆ ಸಿನೆಮಾ ಎಂದಾಗ, ಇಲ್ಲಿ ಹಾಸ್ಯದ ಜೊತೆಗೇ ವಿಭಿನ್ನವಾದ ಪಾತ್ರಗಳನ್ನು ಸೃಷ್ಟಿಸಬೇಕಾಗುತ್ತದೆ. ನಾಯಕ ನಟ ಯಾವ ರೀತಿಯಲ್ಲಿ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯಬಲ್ಲ ಎಂಬುದಕ್ಕೆ ಹೆಚ್ಚಿನ ಗಮನ ಹಾಗೂ ಒತ್ತು ನೀಡಬೇಕಾಗುತ್ತದೆ. ತುಳು ಚಿತ್ರರಂಗದ ವೈಶಿಷ್ಟವೇ ಇದು. ಇಲ್ಲಿ ಯುವ ನಟರು ತಮ್ಮ ವಿಭಿನ್ನ ಶೈಲಿಗಳ ಮೂಲಕ ಪ್ರೇಕ್ಷಕರನ್ನು ಸೆಳೆದರೆ, ಹಿರಿಯ ನಟರು ತಮ್ಮ ಹಾಸ್ಯ ಪ್ರಧಾನ ಭೂಮಿಕೆಗಳ ಮೂಲಕ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಯುವ ನಟರಿಗೆ ತುಳು ಚಿತ್ರರಂಗ ಸಾಕಷ್ಟು ಅವಕಾಶ ಕಲ್ಪಿಸಿದೆ. ಬೇಡಿಕೆಯೂ ಉತ್ತಮವಾಗಿದೆ.

► ತುಳು ಚಿತ್ರಗಳಿಗೆ ಬೇಡಿಕೆ ಕೊರತೆಯೇ?

ತುಳು ಚಿತ್ರರಂಗದ ಮಾರುಕಟ್ಟೆ ಸೀಮಿತವಾದದ್ದು. ವರ್ಷಕ್ಕೊಂದು ಚಿತ್ರ ಮಾತ್ರವೇ ಹಿಟ್ ಆಗಬಹುದಾದ ಪರಿಸ್ಥಿತಿ ನಮ್ಮದು. ತುಳುವರು ಎಲ್ಲ್ಲ ಭಾಷೆಯ ಚಿತ್ರಗಳನ್ನು ವೀಕ್ಷಿಸುತ್ತಾರೆ. ಆದರೆ ತುಳು ಚಿತ್ರಗಳನ್ನು ಬಹುತೇಕವಾಗಿ ತುಳುವರು ಮಾತ್ರವೇ ವೀಕ್ಷಿಸುತ್ತಾರೆ. ಹಾಗಾಗಿ ಒಂದರ ಮೇಲೊಂದರಂತೆ ತುಳುಚಿತ್ರಗಳು ಬಿಡುಗಡೆಗೊಳ್ಳುತ್ತಿರುವುದರಿಂದ ಮಧ್ಯಮ ವರ್ಗದ ತುಳುವ ಪ್ರೇಕ್ಷಕರು ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳಿಗೆ ಹೋಗುವುದು ಕಷ್ಟಕರವಾಗುತ್ತಿದೆ ಅಷ್ಟೆ.

► ಇದಕ್ಕೇನು ಪರ್ಯಾಯ ವ್ಯವಸ್ಥೆ?

ನನ್ನ ವಿಶ್ಲೇಷಣೆಯ ಪ್ರಕಾರ ತುಳು ಚಿತ್ರವೊಂದು ಥಿಯೇಟರ್‌ಗೆ ಬಿಡುಗಡೆಯಾಗಿ ಕನಿಷ್ಠ 3 ತಿಂಗಳ ನಂತರ ಮತ್ತೊಂದು ಚಿತ್ರ ತೆರೆ ಕಂಡರೆ ಪ್ರೇಕ್ಷಕರೂ ಸಾವರಿಸಿಕೊಳ್ಳಲು ಸಾಧ್ಯವಾಗಬಹುದು. ಇಲ್ಲವಾದಲ್ಲಿ ಮಧ್ಯಮ ವರ್ಗದ ಪ್ರೇಕ್ಷಕ ಕೂಡಾ ಮತ್ತೆ ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ನೋಡಬೇಕೆಂದರೆ ತನ್ನ ಜೇಬಿನ ಖರ್ಚು ವೆಚ್ಚಗಳ ಲೆಕ್ಕಾಚಾರ ಹಾಕುವುದು ಸಾಮಾನ್ಯ.

► ಸಾಮಾನ್ಯ ಥಿಯೇಟರ್‌ಗಳ ಸಂಖ್ಯೆ ಹೆಚ್ಚಳವಾಗಬೇಕಿದೆ ಅಂತೀರಾ?

ತುಳು ಚಿತ್ರರಂಗದಲ್ಲಿ ಕಲಾವಿದರಿಗಾಗಲಿ, ತಂತ್ರಜ್ಞರಿಗಾಗಲಿ ಯಾವುದೇ ಕೊರತೆ ಇಲ್ಲ. ಅದ್ಭುತ ಕಲಾವಿದರಿದ್ದಾರೆ. ನುರಿತ ತಂತ್ರಜ್ಞರಿದ್ದಾರೆ. ಆದರೆ ಜನಸಾಮಾನ್ಯರೆಲ್ಲಾ ಕುಟುಂಬ ಸಮೇತ ರಾಗಿ ನೋಡುವ ಸಾಮಾನ್ಯ ಥಿಯೇಟರ್‌ಗಳ ಕೊರತೆ ಇರುವಂತೆ ಭಾಸವಾಗುತ್ತಿದೆ. ಉದಾಹರಣೆಗೆ ಹೇಳುವುದಾದರೆ, ಮುಲ್ಕಿ, ಪಡುಬಿದ್ರೆ ಇಲ್ಲಿನ ತುಳು ಚಿತ್ರ ಪ್ರೇಮಿಗಳು ಉಡುಪಿ ಅಥವಾ ಮಂಗಳೂ

ರಿನ ಥಿಯೇಟರ್‌ಗಳತ್ತ ಬರಬೇಕಾಗಿದೆ. ಇದಕ್ಕಾಗಿ ಅವರು ಸಾಕಷ್ಟು ಪ್ರಯಾಣ ವೆಚ್ಚವನ್ನೇ ಭರಿಸಬೇಕಾಗುತ್ತದೆ. ಹಾಗಾಗಿ ಅವರು ಚಿತ್ರ ವೀಕ್ಷಿಸುವ ಬಗ್ಗೆ ಹಲವು ಬಾರಿ ಯೋಚಿಸುತ್ತಾರೆ. ಅಷ್ಟು ಹೊತ್ತಿಗಾಗಲೇ ಕೆಲ ದಿನಗಳು ಕಳೆದು ಹೋಗಿರುತ್ತವೆ. ನಮಗೆ ಪ್ರಥಮ ವಾರದ ಸಂಗ್ರಹವೇ ಪ್ರಮುಖವಾಗಿರುತ್ತದೆ.

► ನಿಮ್ಮ ಮುಂಬರುವ ರಾಹುಕಾಲ, ಗುಳಿಗಕಾಲ ಚಿತ್ರದಲ್ಲಿ ನಿಮ್ಮ ಪಾತ್ರದ ವಿಭಿನ್ನತೆ?

ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂಬುದು ನನ್ನ ಬಯಕೆ. ನಾಯಕ ನಟನಾಗಿ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಎಂದು ಹೇಳಲಾರೆ. ಆದರೆ ಸಿನೆಮಾದ ಚಿತ್ರಕಥೆಗೆ ಹೊಂದಿಕೊಂಡು ನನ್ನ ವಿಭಿನ್ನ ಪಾತ್ರವಿದೆ.

► ಕನ್ನಡದಲ್ಲಿ ನಿಮ್ಮ ಹೊಸ ಚಿತ್ರ?

‘ಪುರುಷೋತ್ತಮನ ಪ್ರಸಂಗ’ ಎಂಬ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ಹೊಸ ಅರ್ಜುನ್ ಕಾಪಿಕಾಡ್‌ರನ್ನು ನೋಡಬಹುದಾಗಿದೆ. ಅಂದರೆ ವಿಭಿನ್ನ ಪಾತ್ರದಲ್ಲಿ. ಜನವರಿ ಮಧ್ಯಭಾಗದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಇದು ನನ್ನ ಎರಡನೇ ಕನ್ನಡ ಚಿತ್ರ.

► ರಂಗಭೂಮಿಯ ಏಳುಬೀಳು, ಹೊಸತನಗಳೊಂದಿಗೆ ಬೆಳೆದ ನಿಮಗೆ ಯಾವ ರೀತಿ ನೆರವು ದೊರಕಿದೆ?

ನನಗೆ ಬಾಲ್ಯದಿಂದಲೂ ಪ್ರಭಾವ ಬೀರಿದ್ದು ರಂಗಭೂಮಿ. ನಾನು ಇಂದು ನಟನಾಗಿ ಪ್ರೇಕ್ಷಕರಿಂದ ಗುರುತಿಸಲ್ಪಟ್ಟಿದ್ದರೆ ಅದು ರಂಗಭೂಮಿಯ ಹಿನ್ನೆಲೆಯೂ ಕಾರಣ. ಆದರೆ ಚಿತ್ರರಂಗವು ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಕಲಿಸುತ್ತದೆ. ನಾವು ನಮ್ಮ ಕೆಲಸವನ್ನು ಪೂಜೆಯನ್ನಾಗಿ ನಿರ್ವಹಿಸಬೇಕೆಂಬುದನ್ನು ಈ ಚಿತ್ರರಂಗ ಕಲಿಸಿಕೊಟ್ಟಿದೆ. ಇನ್ನು ನಟನೆ ಬಹುಶಃ ನಮ್ಮ ತಂದೆ ದೇವದಾಸ್ ಕಾಪಿಕಾಡ್‌ರಿಂದ ನನಗೆ ಬಳುವಳಿಯಾಗಿ ಬಂದಿರಬೇಕು. ನನಗೆ ಆಸಕ್ತಿ ಇತ್ತು. ಪ್ರತಿಯೊಂದು ನಾಟಕವನ್ನು ಪ್ರೇಕ್ಷಕನಾಗಿ ವೀಕ್ಷಿಸಿರುವುದಕ್ಕಿಂತ ನಾನು ಪರದೆಯ ಬದಿಯಿಂದಲೇ ವೀಕ್ಷಿಸಿದ್ದು ಅಧಿಕ. 6ನೇ ತರಗತಿಯಲ್ಲಿರುವಾಗಲೇ ನಾನು ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನನ್ನ ಜತೆ ಹಿರಿಯ ವಿದ್ಯಾರ್ಥಿಗಳು ನಟಿಸಿದ್ದರೂ ನಾನು ಪ್ರಥಮ ಸ್ಥಾನ ಗಳಿಸಿದ್ದೆ. ಹಾಗಾಗಿ ರಂಗಭೂಮಿ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ.

► ನಟನಾಗಿರದಿರುತ್ತಿದ್ದರೆ ನಿಮ್ಮ ವೃತ್ತಿಪರ ಆಯ್ಕೆ ಏನಾಗಿತ್ತು?

ನಾನು ಎಂಬಿಎ ಪದವೀಧರ. ಎಂಬಿಎ ಕಲಿಯುತ್ತಿದ್ದಾಗಲೇ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದಲ್ಲಿ ನಟಿಸಿದೆ. ಬಳಿಕ ಗಲ್ಫ್ ನ ಕಂಪೆನಿಯೊಂದರಲ್ಲಿ ನಾನು ಸಂದರ್ಶನಕ್ಕೂ ಹಾಜರಾಗಿದ್ದೆ. ಉದ್ಯೋಗವೂ ದೊರಕಿತ್ತು. ಚಿತ್ರರಂಗವನ್ನು ನಾನು ಆಯ್ದುಕೊಂಡಿರದಿದ್ದರೆ, ನಾನಿಂದು ಒಮನ್‌ನಲ್ಲಿ ಉದ್ಯೋಗದಲ್ಲಿರುತ್ತಿದ್ದೆ. ಆದರೆ ಚಿತ್ರರಂಗ ನನ್ನ ಫ್ಯಾಶನ್. ಅದರಿಂದಾಗಿಯೇ ಇಂದು ನಾನು ನಟನಾಗಿದ್ದೇನೆ. ನನ್ನ ಮುಂದಿನ ಚಿತ್ರ ‘ರಾಹುಕಾಲ ಗುಳಿಗಕಾಲ’ ತುಳುವಿನ ನನ್ನ 13ನೇ ಚಿತ್ರವಾಗಿದೆ.

Writer - ಸಂದರ್ಶನ: ಸತ್ಯಾ ಕೆ.

contributor

Editor - ಸಂದರ್ಶನ: ಸತ್ಯಾ ಕೆ.

contributor

Similar News