ಡಿ.25-30: ಮಂಗಳೂರಿನಲ್ಲಿ ವಿಎಚ್‌ಪಿ ಅಂತಾರಾಷ್ಟ್ರೀಯ ಬೈಠಕ್

Update: 2019-12-03 08:45 GMT

ಮಂಗಳೂರು : ವಿಶ್ವಹಿಂದೂ ಪರಿಷತ್‌ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಡಿಸೆಂಬರ್ 25ರಿಂದ 30ರವರೆಗೆ ಆಯೋಜಿಸಲಾಗಿದೆ.

ಸುದ್ದಿಗೋಷ್ಟಿಯಲ್ಲಿಂದು ಈ ವಿಷಯ ತಿಳಿಸಿದ ವಿಎಚ್‌ಪಿ ಕರ್ನಾಟಕ ವಲಯದ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಈ ಬೈಠಕ್‌ನಲ್ಲಿ ಹಿಂದಿನ ವರ್ಷದ ಕಾರ್ಯಗಳ ಪ್ರಗತಿ ಹಾಗೂ ಮುಂದಿನ ವರ್ಷದ ಸಿದ್ಧತೆಗ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

32 ದೇಶಗಳ 350ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕರ್ನಾಟಕ ಹಾಗೂ ಮಂಗಳೂರು ವಿಭಾಗ ಆತಿಥ್ಯ ವಹಿಸಲಿದ್ದು, ಇದಕ್ಕೆ ಸಂಬಂಧಿಸಿ ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸಂಘ ನಿಕೇತನದಲ್ಲಿ ಈ ಬೈಠಕ್ ನಡೆಯಲಿದ್ದು, ಮೊದಲ ಎರಡು ಹಾಗೂ ಕೊನೆಯ ಎರಡು ದಿನಗಳಲ್ಲಿ ಪರಿಷತ್‌ನ ಕೇಂದ್ರೀಯ ಮುಖ್ಯಸ್ಥರು ಮಾತ್ರವೇ ಭಾಗವಹಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಪೇಜಾವರ ಶ್ರೀಗಳು ಕೂಡಾ ಭಾಗವಹಿಸಲಿದ್ದಾರೆ. ಬೈಠಕ್‌ನಲ್ಲಿ ರಾಷ್ಟ್ರೀಯ ಕಾರ್ಯವಾಹಕ ಸುರೇಶ್ ಬಯ್ಯಾಜಿ ಜೋಶಿ ಹಾಗೂ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕ್ಜೆ ಭಾಗವಹಿಸುವರು ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ವಿಎಚ್‌ಪಿ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಮಂಗಳೂರು ಅಧ್ಯಕ್ಷ ಗೋಪಾಲ್ ಕುತ್ತಾರ್, ಕಾರ್ಯದರ್ಶಿ ಶಿವಾನಂದ ಮೆಂಡನ್ ಉಪಸ್ಥಿತರಿದ್ದರು.

ಅಯೋಧ್ಯೆ: ಟ್ರಸ್ಟಿಗಳ ತೀರ್ಮಾನಕ್ಕೆ ಬೆಂಬಲ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಸಿದ್ಧತೆಗಳು ನಡೆಯುತ್ತಿವೆ. ಟ್ರಸ್ಟ್ ರಚಿಸಲು ಕೇಂದ್ರ ಸರಕಾರಕ್ಕೆ ಉಚ್ಚ ನ್ಯಾಯಾಲಯದ ಈಗಾಗಲೇ ಆದೇಶ ನೀಡಿದೆ. ಟ್ರಸ್ಟಿಗಳ ತೀರ್ಮಾನಕ್ಕೆ ವಿಎಚ್‌ಪಿ ಬೆಂಬಲ ನೀಡಲಿದೆ. ಕೇಂದ್ರ ಸರಕಾರ ಯಾವ ರೀತಿಯಲ್ಲಿ ತೀರ್ಮಾನ ಕೈಗೊಂಡು ಯಾವ ರೀತಿಯ ಪ್ರತಿನಿಧಿತ್ವ ನೀಡುತ್ತದೆಯೋ ಅದನ್ನು ಪರಿಷತ್ ನಿರ್ವಹಿಸಲಿದೆ. ಟ್ರಸ್ಟ್ ಯಾವ ರೀತಿ ರಚನೆಯಾಗಬೇಕೆಂಬುದು ಹಿರಿಯರಿಗೆ ಬಿಟ್ಟಿದ್ದು. ರಾಮ ಮಂದಿರ ನಿರ್ಮಾಣ ಆಗಬೇಕೆಂಬುದು ನಮ್ಮ ಸಂಕಲ್ಪ.

- ಪ್ರೊ. ಎಂ.ಬಿ. ಪುರಾಣಿಕ್, ಕಾರ್ಯಾಧ್ಯಕ್ಷರು, ವಿಎಚ್‌ಪಿ, ಕರ್ನಾಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News