ಉಪಚುನಾವಣೆ ನಂತರ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಚಿಂತಾಜನಕ: ಅರವಿಂದ ಲಿಂಬಾವಳಿ

Update: 2019-12-03 12:33 GMT

ಬೆಂಗಳೂರು, ಡಿ.3: ಬಿಜೆಪಿಗೆ ಸದ್ಯ ಜೆಡಿಎಸ್-ಕಾಂಗ್ರೆಸ್ ಶಾಸಕರ ಅಗತ್ಯವಿಲ್ಲ. ಆದರೆ, ಅವರೇ ಬರುತ್ತೇವೆಂದರೆ ಬಿಡುವುದಕ್ಕೆ ಆಗುತ್ತದೆಯೇ ಎಂದು ಬಿಜೆಪಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಪಕ್ಷಗಳ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಡಿ.9ರಂದು ಯಾರು ಬರುತ್ತಾರೆಂದು ಹೇಳುತ್ತೇವೆ. ಒಟ್ಟಾರೆ ಉಪಚುನಾವಣೆ ನಂತರ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಚಿಂತಾಜನಕ ಆಗಲಿದೆ ಎಂದರು.

15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಉಪಚುನಾವಣೆ ಬಳಿಕ ನಮ್ಮ ಸರಕಾರ ಸುಭದ್ರವಾಗಲಿದೆ. ಮಹಾರಾಷ್ಟ್ರದ ಬೆಳವಣಿಗೆ ಬಳಿಕ ಕಾಂಗ್ರೆಸ್ ನಾಯಕರಲ್ಲಿ ಆಸೆ ಹುಟ್ಟಿಕೊಂಡಿದೆ. ಆದರೆ, ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಕಾಂಗ್ರೆಸ್, ಜೆಡಿಎಸ್‌ಗೆ ಇದ್ದಿದ್ದರೆ ರಾಜ್ಯಸಭೆಗೆ ಅಭ್ಯರ್ಥಿ ಹಾಕಬಹುದಿತ್ತು. ಅವರಿಗೆ ವಿಶ್ವಾಸ ಇಲ್ಲದೇ ರಾಜ್ಯಸಭೆಗೆ ಸ್ಪರ್ಧಿಸಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಕೆ.ಸಿ ರಾಮಮೂರ್ತಿ ಅವಿರೋಧ ಆಯ್ಕೆಯಾಗುತ್ತಿದ್ದಾರೆ ಎಂದರು.

ಇದೇ ವೇಳೆ ಉಪಚುನಾವಣೆಯ ನಂತರ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ, ಹೈಕಮಾಂಡ್ ಚರ್ಚೆ ಮಾಡಿ ಅಂತಿಮಗೊಳಿಸುತ್ತಾರೆ. ಯಾರನ್ನು ಸೇರಿಸಿಕೊಳ್ಳಬೇಕೋ, ಬಿಡಬೇಕೋ ಅನ್ನೋದನ್ನ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News