ಆಮೆ ಬೇಟೆ : ಬಾಲಕ ಸಹಿತ ಮೂವರ ಬಂಧನ

Update: 2019-12-03 14:05 GMT

ಕೊಲ್ಲೂರು, ಡಿ.3: ಆಲೂರು ಗ್ರಾಮದ ಕಳಿ ಎಂಬಲ್ಲಿರುವ ನದಿಯಲ್ಲಿ ಡಿ. 3ರಂದು ಬೆಳಗಿನ ಜಾವ ಆಮೆ ಮತ್ತು ಕೂಮಾಗಳನ್ನು ಬೇಟೆಯಾಡುತ್ತಿದ್ದ ಆರೋಪದಲ್ಲಿ  ಮೂವರನ್ನು ಕೊಲ್ಲೂರು ವನ್ಯಜೀವಿ ಇಲಾಖೆ ತಂಡ ಬಂಧಿಸಿದೆ.

ಬಂಧಿತರನ್ನು ಕೊಲೂರು ಸೌರ್ಪಣಿಕ ಸ್ನಾನಘಟ್ಟದ ಬಳಿಯ ನಿವಾಸಿ ಶೀನ ಕೊರಗ (38), ಕೊಲ್ಲೂರು ಕಲ್ಯಾಣಿಗುಡ್ಡೆ ಚಂದ್ರ ಕೊರಗ(38) ಮತ್ತು ಅಪ್ರಾಪ್ತ ವಯಸ್ಸಿನ ಬಾಲಕ ಎಂದು ಗುರುತಿಸಲಾಗಿದೆ. ಇವರೆಲ್ಲರು ಸಂಬಂಧಿಕರಾ ಗಿದ್ದು, ಆಹಾರಕ್ಕಾಗಿ ಆಮೆಗಳನ್ನು ಬೇಟೆಯಾಡುತ್ತಿದ್ದರೆನ್ನಲಾಗಿದೆ.

ಬಂಧಿತರಿಂದ 9 ಆಮೆ, 26 ಕೂಮಗಳು (ಇಂಡಿಯನ್ ಬ್ಲಾಕ್ ಟರ್ಟಲ್) ಸೇರಿದಂತೆ ಒಟ್ಟು 35 ಜೀವಂತ ಆಮೆಗಳನ್ನು ಮತ್ತು ಮನೆಯಲ್ಲಿ ಸುಟ್ಟು ತಿಂದಿರುವ ಆಮೆಗಳ 15 ಚಿಪ್ಪುಗಳನ್ನು (ಶೀನ ಮನೆಯಿಂದ 10 ಮತ್ತು ಚಂದ್ರ ಮನೆಯಿಂದ 5 ಚಿಪ್ಪು) ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‌ನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿ. 2ರಂದು 15 ಆಮೆಗಳನ್ನು ಹಿಡಿದು ಮನೆಗೆ ಕೊಂಡೊಯ್ದು ತಿಂದಿದ್ದು, ಇಂದು ಕೂಡ ಅದೇ ನದಿಯಲ್ಲಿ ಆಮೆ ಹಿಡಿಯಲು ಬಂದಿದ್ದರು. ಈ ಸಂದರ್ಭ ಗಸ್ತು ತಿರುಗುತ್ತಿದ್ದ ಕೊಲ್ಲೂರು ವನ್ಯಜೀವಿ ಇಲಾಖೆಯ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಈ ಕೃತ್ಯ ಬೆಳಕಿಗೆ ಬಂತೆನ್ನಲಾಗಿದೆ.

ವಶಪಡಿಸಿಕೊಂಡಿರುವ ಆಮೆಯು ಶೆಡ್ಯೂಲ್ ಒಂದು ಭಾಗ ಎರಡರ ಪ್ರಕಾರ ಹೆಚ್ಚಿನ ಸಂರಕ್ಷಣೆ ಇರುವ ಪ್ರಾಣಿಯಾಗಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣೆ ಕಾಯಿದೆ 1972 ಪ್ರಕಾರ ಕೇಸು ದಾಖಲಿಸಿ, ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕೊಲ್ಲೂರು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಗಣಪತಿ ನಾಯ್ಕಾ ನಿರ್ದೇಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದಯಾನಂದ ಕೆ., ಸಿದ್ದೇಶ್ವರ ಕುಂಬಾರ, ಅರಣ್ಯ ರಕ್ಷಕರಾದ ದೇವಿಪ್ರಸಾದ್, ವಿವೇಕ ಮತ್ತು ಇಡೂರು ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News