ವಿಕಲಚೇತನರ ಸಾಧನೆ ಎಲ್ಲಕ್ಕಿಂತಲೂ ಮಿಗಿಲು: ದಿನಕರ ಬಾಬು
ಉಡುಪಿ, ಡಿ.3: ಯಾವುದೇ ಸಾಧನೆ ಮಾಡಲು ಮನಸ್ಸು ಗಟ್ಟಿಯಾಗಿರ ಬೇಕು. ಆ ನಿಟ್ಟಿನಲ್ಲಿ ವಿಕಲಚೇತನರ ಸಾಧನೆಗೆ ಪ್ರೋತ್ಸಾಹ ನೀಡಬೇಕಾಗಿದೆ. ವಿಶೇಷ ಮಕ್ಕಳು ಹಾಗೂ ವಿಕಲಚೇತನರು ಮಾಡುವ ಸಾಧನೆಯು ಎಲ್ಲಕ್ಕಿಂತ ಮಿಗಿಲಾದ ಸಾಧನೆಯಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವಿಕಲ ಚೇತನರ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘ, ವಿಕಲಚೇತನರ ಸಂಘಟನೆಗಳು ಮತ್ತು ಪಾಲಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಮಿನಿ ಹಾಲ್‌ನಲ್ಲಿ ಆಯೋಜಿಸಲಾದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿ, ಇಂದು ವಿಕಲಚೇತನರು ಕ್ರೀಡೆ, ನೃತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಇದೆಲ್ಲವೂ ಪೋಷಕರ ಹಾಗೂ ಗುರುಗಳ ಪ್ರೋತ್ಸಾಹದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಧಕ ವಿಕಲಚೇತನರಾದ ಶ್ರೀಲಕ್ಷ್ಮೀ, ಅರ್ಚನಾ, ಮುಹಮ್ಮದ್ ರಫೀಕ್ ಕಲ್ಯಾಣಪುರ, ರಮ್ಯ ಐತಾಳ್, ಲಲಿತಾ ಕೊರವಾಡಿ ಅವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲ ಪಾಡಿ ಅವರನ್ನು ಸಹ ಗೌರವಿಸಲಾಯಿತು. ವಿಶೇಷ ಮಕ್ಕಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಕೆ.ಜಯಕರ ಶೆಟ್ಟಿ ಇಂದ್ರಾಳಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗಹ್ಲೋಟ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಸಾರ್ವಜನಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ, ಭಾರತೀಯ ರೆಡ್‌ಕ್ರಾಸ್‌ನ ಬಸ್ರೂರು ರಾಜೀವ ಶೆಟ್ಟಿ, ಜೈವಿಠಲ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ ಸ್ವಾಗತಿಸಿ ದರು. ಬಳಿಕ ವಿಶೇಷ ಶಾಲಾ ಮಕ್ಕಳು ಮತ್ತು ವಿಕಲಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷ ಶಾಲೆಯ ಮಕ್ಕಳು ಸಿದ್ಧ ಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.