ಮೂಲಸೌಕರ್ಯ ಕ್ಷೇತ್ರದಲ್ಲಿ 1 ಲಕ್ಷ ಕೋಟಿ ಹೂಡಿಕೆಗೆ ನಿರ್ಧಾರ: ನಿರ್ಮಲಾ ಸೀತಾರಾಮನ್

Update: 2019-12-03 15:46 GMT

ಹೊಸದಿಲ್ಲಿ, ಡಿ.3: ಮತ್ತಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ನರೇಂದ್ರ ಮೋದಿ ಸರಕಾರ ಪೂರಕ ವಾತಾವರಣ ನಿರ್ಮಿಸಿದ್ದು ಮುಂದಿನ 5 ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಕೋಟಿ ರೂ. ಬಂಡವಾಳ ಹೂಡಲು ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ ಭಾರತ-ಸ್ವೀಡನ್ ವಾಣಿಜ್ಯ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ತೆರಿಗೆ ಕಡಿತವೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಭಾರತದಲ್ಲಿ ಹೂಡಿಕೆ ಮಾಡುವಂತೆ ಸ್ವೀಡನ್ ಉದ್ಯಮಿಗಳಿಗೆ ಕರೆ ನೀಡಿದ ಅವರು, ಬ್ಯಾಂಕಿಂಗ್, ಗಣಿಗಾರಿಕೆ, ವಿಮೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇನ್ನಷ್ಟು ಸುಧಾರಣೆ ತರಲು ಕೇಂದ್ರ ಸರಕಾರ ಬದ್ಧವಾಗಿದೆ. ಭಾರತವನ್ನು ಹೆಚ್ಚು ಆಕರ್ಷಕ ಹೂಡಿಕೆಯ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಇನ್ನಷ್ಟು ಸುಧಾರಣೆ ತರಲಾಗುವುದು ಎಂದು ಹೇಳಿದ್ದಾರೆ.

ಹೊಸ ಹೂಡಿಕೆಯನ್ನು ಆಕಿರ್ಷಸಲು ಹಾಗೂ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಲಾಗಿದೆ. ಈ ನಿರ್ಧಾರದ ಫಲ ಈಗಾಗಲೇ ಗೋಚರಕ್ಕೆ ಬರುತ್ತಿದ್ದು ಹಲವು ದೇಶೀಯ ಮತ್ತು ವಿದೇಶಿ ಸಂಸ್ಥೆಗಳು ಹೂಡಿಕೆಯಲ್ಲಿ ಆಸಕ್ತಿ ತೋರುತ್ತಿವೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News