ದೆಹಲಿಯಲ್ಲಿ ಹೋರಾಟ ನಡೆಸಿದರೆ ಸಮಸ್ಯೆಗೆ ಪರಿಹಾರ: ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ

Update: 2019-12-03 15:47 GMT

ಕುಂದಾಪುರ, ಡಿ.3: ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಶಾಸ್ತ್ರಿ ಸರ್ಕಲ್ ಬಳಿಯ ಫ್ಲೈಓವರ್ ಕಾಮಗಾರಿ ವಿಳಂಬ ವಿರೋಧಿಸಿ ಮತ್ತು ನಿಗದಿತ ಅವಧಿ ಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, 2016ರಲ್ಲಿ ಬದಲಾದ ಪ್ರಸ್ತಾವಿತ ಯೋಜನೆಗೆ 22.24 ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ದೊರಕಿತ್ತು. ಇದೀಗ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ಹಲವು ಕಾರಣಗಳಿವೆ. ಈ ಬಗ್ಗೆ ಸಂಸದರು, ಶಾಸಕರು, ಹೋರಾಟ ಸಮಿತಿಯ ಪದಾಧಿಕಾರಿಗಳ ನಿಯೋಗ ದೆಹಲಿಗೆ ತೆರಳಿ ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದರೆ ಮಾತ್ರ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ದೆಹಲಿ ಯಲ್ಲಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಶಾಸ್ತ್ರೀ ವೃತ್ತದಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಪ್ರತಿಮೆಗೆ ಮಾಲಾ ರ್ಪಣೆ ಮಾಡಿ ಧರಣಿಗೆ ಚಾಲನೆ ನೀಡಿದ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಮಾತನಾಡಿ ಯೋಜನಾ ವೆಚ್ಚ ತಯಾರಿಸದೆ ಈ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಹಣ ಯೋಜನೆಗೆ ಬಳಸಲಾಗುತ್ತಿದೆ. ಆದರೂ ಇದನ್ನು ಪ್ರಶ್ನಿಸುವವರು ಇಲ್ಲವಾಗಿದೆ. ಕೇವಲ 10.5 ಕಿ.ಮೀ ವ್ಯಾಪ್ತಿಯಲ್ಲಿ 2 ಟೋಲ್‌ಗೇಟ್ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಜನಪ್ರತಿನಿಧಿಗಳು ಮೌನ ವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟ ಸಮಿತಿಯ ಕಿಶೋರ ಕುಮಾರ್ ಮಾತನಾಡಿ, 2010ರಲ್ಲಿ ಆರಂಭವಾದ ಕಾಮಗಾರಿಯು 2013ರಲ್ಲಿ ಪೂರ್ಣ ಗೊಳ್ಳಬೇಕಾಗಿತ್ತು. ಹೆದ್ದಾರಿ ವಿಸ್ತರಣೆಯ ಮೂಲ ಯೋಜನೆಯಲ್ಲಿ ಬಸ್ರೂರು ಮೂರು ಕೈ ಬಳಿ ಎಂಬ್ಯಾಕ್ ಮೆಂಟ್, ಟಿ.ಟಿ.ರಸ್ತೆ ಬಳಿ ಅಂಡರ್‌ಪಾಸ್ ನಿರ್ಮಾಣ ಮಾಡುವ ಯೋಜನೆ ಗಳು ಇರಲೇ ಇಲ್ಲ. ಗುತ್ತಿಗೆ ಕಂಪೆನಿಯ ಅನೂಕೂಲಕ್ಕಾಗಿ ಯೋಜನೆ ಗಳನ್ನು ಬದಲಾಯಿಲಾಗುತ್ತಿದೆ ಎಂದು ಆರೋಪಿಸಿದರು.

ಹೆದ್ದಾರಿ ತಡೆಗೆ ಯತ್ನ:  ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ನೀಡಿದ ಭರವಸೆ ಯಿಂದ ತೃಪ್ತರಾಗದ ಪ್ರತಿಭಟನಕಾರರು, ಧರಣಿ ಮುಗಿಯುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ತಡೆ ನಡೆಸಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ನವಯುಗ ಗುತ್ತಿಗೆ ಕಂಪೆನಿ ವಿರುದ್ದ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದು.

ತಕ್ಷಣವೇ ಪೊಲೀಸ್ ಅಧಿಕಾರಿಗಳು ರಸ್ತೆ ತಡೆ ನಡೆಸದಂತೆ ಪ್ರತಿಭಟನಾ ಕಾರರ ಮನವೂಲಿಕೆಗೆ ಮುಂದಾದರು. ಈ ವೇಳೆಯಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಕುಂದಾ ಪುರ ವೃತ್ತ ನಿರೀಕ್ಷಕ ಮಂಜಪ್ಪಡಿ.ಆರ್ ಹಾಗೂ ಎಸ್ಸೈ ಹರೀಶ್ ನಾಯ್ಕೆ ಪ್ರತಿಭಟನಾಕರರ ಮನವೊಲಿಸಿ ಹೆದ್ದಾರಿ ತಡೆ ಹೋರಾಟವನ್ನು ಕೈಬಿಡು ವಂತೆ ಮಾಡಿದರು.

ಪುರಸಭೆ ಮಾಜಿ ಉಪಾಧಕ್ಷ ರಾಜೇಶ್‌ಕಾವೇರಿ, ಸಿಪಿಎಂ ಮುಖಂಡರಾದ ವೆಂಕಟೇಶ ಕೋಣಿ, ಎಚ್.ನರಸಿಂಹ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ವಕೀಲರಾದ ಎ.ಎಸ್.ಎನ್‌ಹೆಬ್ಬಾರ್, ಗೋಪಾಲ ಕೃಷ್ಣ ಶೆಟ್ಟಿ ಶಿರಿಯಾರ, ಸಾಸ್ತಾನ ಹೆದ್ದಾರಿ ಹೋರಾಟ ಸಮಿತಿಯ ಶ್ಯಾಮ್ ಸುಂದರ್ ನಾಯರಿ, ನಿತ್ಯಾನಂದ ಶೆಟ್ಟಿ ಅಂಪಾರು, ಗಣೇಶ್ ಮೆಂಡನ್, ಮಲ್ಯಾಡಿ ಜಯರಾಮ್‌ಶೆಟ್ಟಿ, ಕೆ.ಸಿ.ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಜಿ.ಕೆ.ಗಿರೀಶ್, ಅಬ್ಬು ಮಹಮ್ಮದ್, ಪ್ರಭಾವತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾಮಗಾರಿ ಪೂರ್ಣಗೊಳಿಸಲು ಮಾ.30ರ ಗಡವು

ಸ್ಥಳಕ್ಕೆ ಆಗಮಿಸಿ ಧರಣಿನಿರತರ ಅಹವಾಲು ಸ್ವೀಕರಿಸಿದ ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಅಲ್ಲೇ ಇದ್ದ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆ ಕಂಪೆನಿ ಅಧಿಕಾರಿಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಸ್ಪಷ್ಟವಾದ ದಿನಾಂಕ ತಿಳಿಸುವಂತೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು 2020ರ ಮಾ.31ರೊಳಗೆ ಕಾಮಗಾರಿ ೂರ್ಣಗೊಳಿಸುವ ಭರವಸೆ ನೀಡಿದರು.

ಈ ದಿನಾಂಕದ ಒಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಮಾ.31ರಿಂದ ಟೋಲ್ ಸಂಗ್ರಹ ಬಂದ್ ಮಾಡಲಾಗುವುದು. ಅಲ್ಲದೆ ಎ.ಸಿ ಕೋರ್ಟ್‌ನಲ್ಲಿ 133 ಕಾನೂನು ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ಯನ್ನು ಮುಂದುವರಿಸಲಾಗುವುದು. ಇದರಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News