ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ಭದ್ರತಾ ವೈಫಲ್ಯ: ಅಮಿತ್ ಶಾ ಪ್ರತಿಕ್ರಿಯೆ

Update: 2019-12-03 15:57 GMT

ಹೊಸದಿಲ್ಲಿ, ಡಿ.3: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿವಾಸದಲ್ಲಿ ಕಳೆದ ವಾರ ಸಂಭವಿಸಿದ್ದ ಭದ್ರತಾ ವೈಫಲ್ಯವು ಒಂದು ಕಾಕತಾಳೀಯ ಘಟನೆಯಾಗಿತ್ತು ಎಂದು ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದರು.

ಪ್ರಿಯಾಂಕಾರ ಸೋದರ ರಾಹುಲ್ ಗಾಂಧಿ ಮತ್ತು ಪತಿ ರಾಬರ್ಟ್ ವಾದ್ರಾ ಅವರು ನಿವಾಸದ ಆವರಣವನ್ನು ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವುದಿಲ್ಲ. ನ.25ರಂದು ರಾಹುಲ್ ಗಾಂಧಿ ಅವರು ಕಪ್ಪು ಬಣ್ಣದ ಟಾಟಾ ಸಫಾರಿ ಕಾರಿನಲ್ಲಿ ಪ್ರಿಯಾಂಕಾರ ನಿವಾಸಕ್ಕೆ ಆಗಮಿಸಲಿದ್ದಾರೆ ಎಂದು ಭದ್ರತಾ ಸಿಬ್ಬಂದಿಗೆ ಮಾಹಿತಿಯಿತ್ತು. ರಾಹುಲ್ ಬರಲಿದ್ದ ಸಮಯದಲ್ಲಿಯೇ ಅಂತಹುದೇ ಕಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶಾರದಾ ತ್ಯಾಗಿ ಮತ್ತು ಇತರ ಮೂವರು ಅಲ್ಲಿಗೆ ಆಗಮಿಸಿದ್ದರು. ಹೀಗಾಗಿ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸದೆ ಕಾರನ್ನು ಒಳಗೆ ಬಿಟ್ಟಿದ್ದರು ಎಂದು ವಿವರಿಸಿದ ಶಾ, ಇದೊಂದು ವಿಲಕ್ಷಣ ಕಾಕತಾಳೀಯ ಘಟನೆಯಾಗಿತ್ತು. ಆದಾಗ್ಯೂ ನಾವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದೇವೆ ಮತ್ತು ಮೂವರು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದೇವೆ. ಶೇ.001ರಷ್ಟು ಅಪಾಯವನ್ನು ಎದುರು ಹಾಕಿಕೊಳ್ಳಲು ನಾವು ಬಯಸುವುದಿಲ್ಲ ಎಂದು ತಿಳಿಸಿದರು.

ಅವರು ರಾಜ್ಯಸಭೆಯಲ್ಲಿ ಎಸ್‌ಪಿಜಿ ಕಾಯ್ದೆಗೆ ಮಾಡಲಾಗಿರುವ ಬದಲಾವಣೆಗಳ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದರು. ಈ ಬದಲಾವಣೆಗಳ ಅನ್ವಯ ಪ್ರಿಯಾಂಕಾರಿಗೆ ಒದಗಿಸಲಾಗಿರುವ ಭದ್ರತೆಯನ್ನು ತಗ್ಗಿಸಲಾಗಿದೆ.

ಎಸ್‌ಪಿಜಿ ಕಾಯ್ದೆಯಲ್ಲಿ ಬದಲಾವಣೆಯು ಒಂದು ಕುಟುಂಬವನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ. ನಾವು ಪರಿವಾರ (ಕುಟುಂಬ)ವನ್ನು ವಿರೋಧಿಸುವುದಿಲ್ಲ, ಆದರೆ ಪರಿವಾರ ವಾದಕ್ಕೆ ವಿರೋಧಿಗಳಾಗಿದ್ದೇವೆ. ಪರಿವಾರ ವಾದವನ್ನು ಆಧರಿಸಿ ಭಾರತದ ಪ್ರಜಾಪ್ರಭುತ್ವವನ್ನು ನಡೆಸಲಾಗುವುದಿಲ್ಲ. ಕೇವಲ ಗಾಂಧಿ ಕುಟುಂಬದ ಭದ್ರತೆಯ ಮಾತೇಕೆ? ಗಾಂಧಿ ಕುಟುಂಬ ಸೇರಿದಂತೆ 130 ಕೋಟಿ ಭಾರತೀಯರ ಭದ್ರತೆ ಸರಕಾರದ ಜವಾಬ್ದಾರಿಯಾಗಿದೆ ಎಂದರು.

ಪ್ರತಿಭಟನೆಗಳ ಬಳಿಕ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದ್ದು,ಎಸ್‌ಪಿಜಿ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News