ನಿರ್ಭಯಾ ಹಂತಕರಿಗೆ ಶೀಘ್ರ ಗಲ್ಲು, ಆದರೆ ತಿಹಾರ ಜೈಲಿನಲ್ಲಿ ಈ ಪ್ರಮುಖ ವ್ಯಕ್ತಿಯೇ ಇಲ್ಲ !

Update: 2019-12-03 16:01 GMT

ಹೊಸದಿಲ್ಲಿ, ಡಿ.3: ರಾಷ್ಟ್ರವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಅತ್ಯಾಚಾರ-ಹತ್ಯೆ ಪ್ರಕರಣದ ಅಪರಾಧಿಗಳಿಗೆ ಜೀವವುಳಿಸಿಕೊಳ್ಳುವ ಎಲ್ಲ ಮಾರ್ಗಗಳೂ ಮುಚ್ಚಿಕೊಳ್ಳುತ್ತಿದ್ದು, ಅವರು ನೇಣುಗಂಬವನ್ನೇರುವ ಮುಹೂರ್ತ ಸಮೀಪಿಸುತ್ತಿದೆ. ಇದು ದಿಲ್ಲಿಯ ತಿಹಾರ ಜೈಲಿನ ಅಧಿಕಾರಿಗಳಿಗೆ ತಲೆನೋವನ್ನು ತಂದಿದೆ,ಏಕೆಂದರೆ ಜೈಲಿನಲ್ಲಿ 'ಹ್ಯಾಂಗ್ ಮ್ಯಾನ್ 'ಅಥವಾ ವಧಾಕಾರ ಅಥವಾ ಅಪರಾಧಿಗಳನ್ನು ಗಲ್ಲಿಗೇರಿಸುವ ಸಿಬ್ಬಂದಿಯೇ ಇಲ್ಲ.

ಇನ್ನೊಂದು ತಿಂಗಳಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಬಹುದಾಗಿದ್ದು,ಜೈಲಿನ ಹಿರಿಯ ಅಧಿಕಾರಿಗಳು ಎಲ್ಲ ಆಯ್ಕೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಅವರನ್ನು ಗಲ್ಲಿಗೇರಿಸಲು ಅನುಮತಿ ನೀಡಿ ನ್ಯಾಯಾಲಯವು ಕಪ್ಪು ವಾರಂಟ್ ಹೊರಡಿಸಿದ ಬಳಿಕ ಯಾವುದೇ ದಿನ ಅವರು ನೇಣುಗಂಬವನ್ನೇರಬಹುದು. ರಾಷ್ಟ್ರಪತಿಗಳು ಈ ಅಪರಾಧಿಗಳ ದಯಾಭಿಕ್ಷೆ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಕಪ್ಪು ವಾರಂಟ್ ಹೊರಬೀಳಲಿದೆ.

ಈ ಹಿಂದೆ ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸುವಾಗಲೂ ತಿಹಾರ್ ಜೈಲು ಅಧಿಕಾರಿಗಳು ಇಂತಹುದೇ ಸಮಸ್ಯೆಗೆ ಸಿಲುಕಿದ್ದರು. ಅಂದು ರಾತ್ರಿ ಬೆಳಗಾಗುವುದರಲ್ಲಿ ತ್ವರಿತ ಬೆಳವಣಿಗೆಗಳು ನಡೆದಿದ್ದು,ನೇಣುಗಂಬದ ಸನ್ನೆಯನ್ನು ಎಳೆಯಲು ಜೈಲಿನ ಅಧಿಕಾರಿಯೋರ್ವರು ಕೊನೆಗೂ ಒಪ್ಪಿಕೊಂಡಿದ್ದರು.

 ಈಗ ಅಧಿಕಾರಿಗಳು ಇತರ ಜೈಲುಗಳಲ್ಲಿ ವಧಾಕಾರ ಇದ್ದಾನೆಯೇ ಎಂದು ಅನಧಿಕೃತವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕಾರ್ಯಕ್ಕೆ ಯಾರಾದರೂ ಸಿಗುತ್ತಾರೆಯೇ ಎಂದು ಅವರು ಉತ್ತರ ಪ್ರದೇಶದ ಕೆಲವು ಹಳ್ಳಿಗಳನ್ನೂ ಜಾಲಾಡುತ್ತಿದ್ದಾರೆ. ತಿಹಾರ ಜೈಲಿನ ಕೊನೆಯ ವಧಾಕಾರ ಇದೇ ಪ್ರದೇಶಕ್ಕೆ ಸೇರಿದವನಾಗಿದ್ದ.

ಈ ಬಾರಿ ಅಧಿಕಾರಿಗಳು ವಧಾಕಾರನನ್ನು ನೇಮಕ ಮಾಡಿಕೊಳ್ಳದೆ ಒಂದು ಸಲಕ್ಕಾಗಿ ಆತನ ಸೇವೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಹೆಚ್ಚಿನ ಸಾಧ್ಯತೆಯಿದೆ. ಅಪರೂಪದಲ್ಲಿಯೇ ಅಪರೂಪದ ಪ್ರಕರಣಗಳಲ್ಲಿ ಮರಣ ದಂಡನೆಯನ್ನು ವಿಧಿಸುವುದರಿಂದ ಗಲ್ಲಿಗೇರಿಸುವ ಸಂದರ್ಭಗಳು ತೀರ ಕಡಿಮೆ. ಹೀಗಾಗಿ ಪೂರ್ಣಕಾಲಿಕ ವಧಾಕಾರನನ್ನು ಹೊಂದುವುದು ಕಾರ್ಯಸಾಧ್ಯವಲ್ಲ ಮತ್ತು ಈ ಹುದ್ದೆಗೆ ಸೂಕ್ತ ವ್ಯಕ್ತಿಯನ್ನು ಹುಡುಕುವುದೂ ಕಷ್ಟ ಎಂದು ಜೈಲು ಅಧಿಕಾರಿಯೋರ್ವರು ಹೇಳಿದರು.

ಈ ಬಾರಿ ದೋಷಿಗಳ ಪೈಕಿ ವಿನಯ ಶರ್ಮಾ ಮಾತ್ರ ದಯಾಭಿಕ್ಷೆ ಅರ್ಜಿಯನ್ನು ಸಲ್ಲಿಸಿದ್ದಾನೆ. ಇತರ ದೋಷಿಗಳಾದ ಮುಕೇಶ,ಪವನ್ ಮತ್ತು ಅಕ್ಷಯ ಅರ್ಜಿಗಳನ್ನು ಸಲ್ಲಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News