×
Ad

2022ರ ಒಳಗೆ ಮೊದಲ ದೇಶಿ ನಿರ್ಮಿತ ವಿಮಾನ ವಾಹಕ ಕಾರ್ಯಾಚರಣೆ ಆರಂಭ

Update: 2019-12-03 21:41 IST
Photo: PTI

ಹೊಸದಿಲ್ಲಿ, ಡಿ. 3: ಮೊದಲ ದೇಶೀ ನಿರ್ಮಿತ ವಿಮಾನ ವಾಹಕ 2022ರ ಒಳಗೆ ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ನೌಕಾ ಪಡೆಯ ಮುಖ್ಯ ಅಡ್ಮಿರಲ್ ಕರಂಬೀರ್ ಸಿಂಗ್ ಮಂಗಳವಾರ ಹೇಳಿದ್ದಾರೆ.

ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಡ್ಮಿರಲ್ ಸಿಂಗ್, ಮೂರು ವಿಮಾನ ವಾಹಕಗಳನ್ನು ಹೊಂದುವುದು ನೌಕಾ ಪಡೆಯ ಬಹು ದೀರ್ಘ ಕಾಲದ ಯೋಜನೆಯಾಗಿತ್ತು ಎಂದು ಹೇಳಿದರು. ರಾಷ್ಟ್ರೀಯ ಭದ್ರತೆಯ ಸವಾಲುಗಳನ್ನು ಎದುರಿಸಲು ನೌಕಾ ಪಡೆ ಸಂಪೂರ್ಣ ಸಿದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

ಭಯೋತ್ಪಾದಕ ಗುಂಪುಗಳ ಬೆದರಿಕೆ ನಿಗ್ರಹಿಸಲು ನಾವು ರಕ್ಷಣೆ ಹಾಗೂ ಭದ್ರತಾ ಪಡೆಗಳನ್ನು ಸುಸಜ್ಜಿತಗೊಳಿಸುತ್ತಿದ್ದೇವೆ. ಯಾವುದೇ ಸವಾಲು ಎದುರಿಸಲು ನೌಕಾ ಪಡೆಯೊಂದಿಗೆ ತಟ ರಕ್ಷಣಾ ಪಡೆ ಹಾಗೂ ಇತರ ಭದ್ರತಾ ಸಂಸ್ಥೆಗಳು ಸಿದ್ಧವಾಗಿದೆ ಎಂದು ಭರವಸೆ ನೀಡಲು ನಾನು ಬಯಸುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ನೌಕಾ ಪಡೆಯ ವಾರ್ಷಿಕ ಬಜೆಟ್ ಶೇ. 18ರಿಂದ ಶೇ. 12ಕ್ಕೆ ಇಳಿಕೆಯಾಗಿದೆ ಎಂದು ಅವರು ಬಹಿರಂಗಪಡಿಸಿದರು. ತನ್ನ ಅಗತ್ಯಗಳನ್ನು ಪೂರೈಸಲು ಸರಕಾರದಿಂದ ಹೆಚ್ಚುವರಿ ನಿಧಿ ಕೋರಿದೆ ಎಂದು ಈ ಹಿಂದೆ ನೌಕಾ ಪಡೆ ತಿಳಿಸಿತ್ತು.

ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತ ಸ್ಥಿರ ಪಾತ್ರವನ್ನು ನಿರ್ವಹಿಸುತ್ತಿದೆ ಹಾಗೂ ಈ ವಲಯದ ಇತರ ದೇಶಗಳ ಯಾವುದೇ ಕ್ರಮ ಭಾರತದ ಮೇಲೆ ಪರಿಣಾಮ ಬೀರದು ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News