×
Ad

ಕಾನೂನು ಆಳ್ವಿಕೆ ಇಲ್ಲದಿದ್ದರೆ ಪ್ರಜಾಪ್ರಭುತ್ವ ನಾಶ: ನ್ಯಾ.ವಿಶ್ವನಾಥ ಶೆಟ್ಟಿ

Update: 2019-12-03 22:01 IST

ಉಡುಪಿ, ಡಿ.3: ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರಕ್ಕೆ ಧಕ್ಕೆ ಬಂದಾಗ ಅದನ್ನು ರಕ್ಷಿಸುವ ಕೆಲಸವನ್ನು ವಕೀಲರು ಮಾಡಬೇಕು. ಈ ದೇಶದಲ್ಲಿ ಕಾನೂನು ಆಳ್ವಿಕೆ ಇಲ್ಲದಿದ್ದರೆ ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯಗಳ ಸಂಕೀರ್ಣ ಆವರಣದಲ್ಲಿ ಮಂಗಳವಾರ ಆಯೋಜಿಸಲಾದ ವಕೀಲರ ದಿನಾ ಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ದೇಶದಲ್ಲಿ ಭ್ರಷ್ಟಾಚಾರ ತುಂಬಿ ಹೋಗಿದೆ. ಸ್ವಾತಂತ್ರಕ್ಕಾಗಿ ನಮ್ಮ ಹಿರಿಯರು ನಡೆಸಿದ ತ್ಯಾಗ ಹಾಗೂ ಹೋರಾಟದ ಮಾದರಿಯಲ್ಲಿಯೇ ವಕೀಲರು ಭ್ರಷ್ಟಾಚಾರವನ್ನು ಈ ಸಮಾಜದಿಂದ ನಿರ್ಮೂಲನೆ ಮಾಡಲು ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು. ಪ್ರತಿಯೊಬ್ಬರಿಗೂ ಸ್ವಾತಂತ್ರ ಎಂಬುದು ಬಹಳ ಅಮೂಲ್ಯವಾದ ಸೊತ್ತು. ಆ ಸ್ವಾತಂತ್ರವನ್ನು ಕಾಪಾಡುವ ಜವಾಬ್ದಾರಿ ನ್ಯಾಯಾಂಗ ಹಾಗೂ ವಕೀಲರ ಮೇಲೆ ಇದೆ. ನ್ಯಾಯಾಲಯ ಎಂಬುದು ಜನರ ಹಕ್ಕುಗಳನ್ನು ರಕ್ಷಿಸುವ ದೇವಾಲಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸಮಾಜ ಏಳಿಗೆ ಮತ್ತು ಬದಲಾವಣೆ ತರಲು ವಕೀಲರಿಗೆ ಸಾಕಷ್ಟು ಅವಕಾಶ ಗಳಿವೆ. ಸ್ವಾತಂತ್ರ ಹೋರಾಟದಲ್ಲಿ ವಕೀಲರು ಮುಂಚೂಣಿಯಲ್ಲಿದ್ದು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದೇ ರೀತಿ ವಕೀಲರೆಲ್ಲ ಒಂದಾಗಿ ದೇಶದ ಬೆಳವಣಿಗೆಗೆ ಸಹಕಾರ ನೀಡುವ ಪ್ರಯತ್ನ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.

ವೃತ್ತಿ ಶ್ರೇಷ್ಠತೆ ಕಾಪಾಡುವುದರಿಂದ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ. ಯಾವುದೇ ವ್ಯಕ್ತಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಅದರಲ್ಲಿ ಸಮಾಜದ ಕೊಡುಗೆ ಅಪಾರ. ಸಮಾಜದಲ್ಲಿ ಬಹಳಷ್ಟು ಗೌರವ ಹಾಗೂ ಶ್ರೇಷ್ಠವಾದ ವೃತ್ತಿ ಅಂದರೆ ಅದು ವಕೀಲ ವೃತ್ತಿಯಾಗಿದೆ. ವಕೀಲ ವೃತ್ತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಇರುವಷ್ಟು ಅವಕಾಶ ಬೇರೆ ಯಾವುದೇ ವೃತ್ತಿಯಲ್ಲಿ ಇರುವುದಿಲ್ಲ ಎಂದು ಲೋಕಾಯುಕ್ತರು ಹೇಳಿದರು.

ಅಧ್ಯಕ್ಷತೆಯನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾದ ಪ್ರತಿವಾದದ ಡೆಸ್ಕ್‌ನ್ನು ವಕೀಲರ ಸಂಘದಿಂದ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನ್ಯಾಯವಾದಿ ರಾಜಶೇಖರ್ ಶ್ಯಾಮರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News