‘ಏಕ ದೇಶ, ಏಕ ಪಡಿತರ ಚೀಟಿ’: 2020 ಜೂನ್ 1ರ ಒಳಗೆ ಅಂತರ್ ರಾಜ್ಯ ಪೊರ್ಟೆಬಿಲಿಟಿ ಅನುಷ್ಠಾನ

Update: 2019-12-03 16:35 GMT

  ಹೊಸದಿಲ್ಲಿ, ಆ. 3: ಇಸವಿ 2020 ಜೂನ್ 1ರ ಒಳಗೆ ದೇಶಾದ್ಯಂತ ‘ಏಕ ರಾಷ್ಟ್ರ, ಏಕ ಪಡಿತರ ಚೀಟಿ’ ಅನುಷ್ಠಾನಗೊಳಿಸುವ ಪ್ರಯತ್ನವಾಗಿ ತೆಲಂಗಾಣ-ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ-ಗುಜರಾತ್ ನಡುವೆ ಅಂತರ ರಾಜ್ಯ ಪಡಿತರ ಚೀಟಿ ಪೋರ್ಟೆಬಿಲಿಟಿಯನ್ನು ಕೇಂದ್ರ ಸರಕಾರ ಶುಕ್ರವಾರ ಆರಂಭಿಸಿದೆ.

ಅಂದರೆ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಜೀವಿಸುತ್ತಿರುವ ಫಲಾನುಭವಿಗಳು ತಮ್ಮ ಪಾಲಿನ ಪಡಿತರವನ್ನು ಈ ಎರಡರಲ್ಲಿ ಯಾವುದೇ ರಾಜ್ಯಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಯಿಂದ ಖರೀದಿಸಬಹುದು. ಇದು ಮಹರಾಷ್ಟ್ರ ಹಾಗೂ ಗುಜರಾತ್‌ಗೆ ಕೂಡ ಅನ್ವಯವಾಗಲಿದೆ.

ಅಂತರ್ ರಾಜ್ಯ ಪೋರ್ಟೆಬಿಲಿಟಿಯನ್ನು ಲೋಕಾರ್ಪಣೆಗೊಳಿಸಿದ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್, ‘‘ಇಂದು ಚಾರಿತ್ರಿಕ ದಿನ. ನಾವು ತಲಾ ಎರಡು ರಾಜ್ಯಗಳನ್ನು ಜೋಡಿಸುವ ಪಡಿತರ ಚೀಟಿ ಪೋರ್ಟೆಬಿಲಿಟಿಯನ್ನು ಆರಂಭಿಸಿದ್ದೇವೆ’’ ಎಂದರು.

ಈ ನಾಲ್ಕು ರಾಜ್ಯಗಳಲ್ಲಿ ಅಂತರ ರಾಜ್ಯ ಹಾಗೂ ಅಂತರ್ ರಾಜ್ಯ ಪಡಿತರ ಚೀಟಿ ಪೋರ್ಟೆಬಿಲಿಟಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ ಎಂದು ಅವರು ತಿಳಿಸಿದರು.

ಈ ನಡುವೆ ಹರ್ಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ರಾಜಸ್ಥಾನ ಹಾಗೂ ತ್ರಿಪುರಾ-ಈ 7 ರಾಜ್ಯಗಳಲ್ಲಿ ಪಡಿತರ ಚೀಟಿಯ ಅಂತರ ರಾಜ್ಯ ಪೋರ್ಟೆಬಿಲಿಟಿಯ ಪರಿಶೀಲನೆ ನಡೆಸಲಾಗುತ್ತಿದೆ. ಅಂದರೆ, ಫಲಾನುಭವಿಗಳು ತಮ್ಮ ಪಾಲಿನ ಪಡಿತರವನ್ನು ಈ ರಾಜ್ಯಗಳ ಯಾವುದೇ ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್)ನಿಂದ ಪಡೆದುಕೊಳ್ಳಬಹುದು.

ಕ್ರಮೇಣ ಅಂತರ್ ರಾಜ್ಯ ಪಡಿತರ ಚೀಟಿ ಪೋರ್ಟೆಬಿಲಿಟಿಯನ್ನು 2020 ಜನವರಿ ಒಳಗೆ ಈ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಆಹಾರ ಕಾರ್ಯದರ್ಶಿ ರವಿ ಕಾಂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News