ದ.ವಲಯ ಅಂತರ ವಿವಿ ಮಹಿಳಾ ಬ್ಯಾಡ್ಮಿಂಟನ್ ಉದ್ಘಾಟನೆ

Update: 2019-12-03 16:44 GMT

ಮಣಿಪಾಲ, ಡಿ.3:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ವಿವಿಯ ಒಳಾಂಗಣ ಕ್ರೀಡಾ ಸಂಕೀರ್ಣ ‘ಮರೆನಾ’ದಲ್ಲಿ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಮಂಗಳವಾರ ಉದ್ಘಾಟನಗೊಂಡಿತು.

ಟೂರ್ನಿಯನ್ನು ಮಾಜಿ ರಾಷ್ಟ್ರೀಯ ಚಾಂಪಿಯನ್ ಹಾಗೂ ಭಾರತದ ರಾಷ್ಟ್ರೀಯ ಆಟಗಾರ್ತಿ ತೃಪ್ತಿ ಮುರ್ಗುಂಡೆ ಅವರು ಅಧಿಕೃತ ವಾಗಿ ಉದ್ಘಾಟಿಸಿದರು. ದಕ್ಷಿಣ ವಲಯದ 50ಕ್ಕೂ ಅಧಿಕ ವಿವಿಗಳ ಮಹಿಳಾ ತಂಡಗಳು ಪಾಲ್ಗೊಂಡ ಆಟಗಾರ್ತಿಯರನ್ನುದ್ದೇಶಿಸಿ ಮಾತನಾಡಿದ ಅವರು ‘ಪ್ರಯತ್ನವನ್ನು ನಿಲ್ಲಿಸಬೇಡಿ’ ಎಂಬ ಸಂದೇಶವನ್ನು ನೀಡಿದರು.

‘ನಾನೆಂದೂ ನನ್ನ ಪ್ರಯತ್ನವನ್ನು ನಿಲ್ಲಿಸಲೇ ಇಲ್ಲ. ನನ್ನ ಈ ದೃಢಸಂಕಲ್ಪದಿಂದ ನಾನು ಸಾಕಷ್ಟು ದೇಶಿಯ ಹಾಗೂ ವಿದೇಶ ಗಳಲ್ಲೂ ಗೆಲುವುಗಳನ್ನು ದಾಖಲಿಸಿದ್ದೇನೆ. ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ನನಗೆ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪ್ರತಿ ಸೋಲು ನನ್ನ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿತ್ತು.’ ಎಂದವರು ನುಡಿದರು.

ವಿದೇಶಗಳಲ್ಲಿ ಕೆಲವು ಟೂರ್ನಿಗಳನ್ನು ಗೆದ್ದರೂ, ರಾಷ್ಟ್ರೀಯ ಚಾಂಪಿಯನ್‌ಷಿಪ್ ಗೆಲ್ಲದ ಕೊರಗು ಇದ್ದೇಇತ್ತು. ಕೊನೆಗೂ ನನ್ನ ಪ್ರಯತ್ನ 2010ರ ಚಾಂಪಿಯನ್‌ಷಿಪ್‌ನಲ್ಲಿ ಯಶಸ್ಸನ್ನು ತಂದಿತು. ಆ ವರ್ಷ ನಾನು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ್ನು ಗೆದ್ದುಕೊಂಡೆ ಎಂದು ತೃಪ್ತಿ ನುಡಿದರು.

ಮುಂದೆ ಕಾಮನ್ವೆಲ್ತ್‌ನಲ್ಲಿ ಕಂಚಿನ ಪದಕ, ದಕ್ಷಿಣ ಏಷ್ಯ ಫೆಡರೇಷನ್ ಗೇಮ್ಸ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದೇನೆ. ಆದುದರಿಂದ ನೀವು ಸಹ ಸತತ ಪ್ರಯತ್ನ ಮುಂದುವರಿಸಿದರೆ ಮುಂದೆ ದೊಡ್ಡ ಟೂರ್ನಿಗಳನ್ನು ಗೆಲ್ಲಲು ಸಾಧ್ಯವಿದೆ ಎಂದು ಅವರು ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ್ತಿಯರಿಗೆ ಕಿವಿಮಾತು ಹೇಳಿದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಮಾಹೆಯ ಕ್ರೀಡಾ ಮಂಳಿಯ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ವಿವಿಯ ಕ್ರೀಡಾಚಟುವಟಿಕೆ ಕುರಿತು ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ವಿವಿಯ ಪ್ರೊ ವೈಸ್‌ಚಾನ್ಸಲರ್‌ಗಳಾದ ಡಾ. ಪಿಎಲ್‌ಎನ್‌ಜಿ ರಾವ್, ಡಾ.ಪೂರ್ಣಿಮಾ ಬಾಳಿಗಾ, ರಿಜಿಸ್ಟ್ರಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್, ಕ್ರೀಡಾ ಮಂಡಳಿಯ ಜೊತೆ ಕಾರ್ಯದರ್ಶಿ ಡಾ.ಶೋಭಾ ಎಂ.ಇ. ಉಪಸ್ಥಿತರಿದ್ದರು.

ಮೆರೆನಾದ ಐದು ಕೋರ್ಟ್‌ಗಳಲ್ಲಿ ಇಂದು ಪ್ರಾಥಮಿಕ ಸುತ್ತಿನ ಪಂದ್ಯಗಳು ನಡೆದವು. ನಾಳೆ ಪ್ರಿ ಕ್ವಾರ್ಟರ್ ಫೈನಲ್ ಹಾಗೂ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಡಿ.5ರಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News