ಚೀನಾ ಹಡಗನ್ನು ವಾಪಸ್ ಕಳುಹಿಸಿದ ನೌಕಾಪಡೆ

Update: 2019-12-03 16:45 GMT

ಹೊಸದಿಲ್ಲಿ, ಡಿ.3: ಕಳೆದ ಸೆಪ್ಟೆಂಬರ್‌ನಲ್ಲಿ ಅಂಡಮಾನ್ ಸಮುದ್ರದಲ್ಲಿಯ ಭಾರತದ ವಿಶೇಷ ಆರ್ಥಿಕ ವಲಯವನ್ನು ಅನಧಿಕೃತವಾಗಿ ಪ್ರವೇಶಿಸಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಶಿ ಯಾನ್ 1 ಹೆಸರಿನ ಸಂಶೋಧನಾ ಹಡಗನ್ನು ಭಾರತೀಯ ನೌಕಾಪಡೆಯು ವಾಪಸ್ ತೆರಳುವಂತೆ ಮಾಡಿತ್ತು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಘಟನೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮಬೀರ್ ಸಿಂಗ್ ಅವರು,' ನಮ್ಮ ಪ್ರದೇಶದಲ್ಲಿ ಕಾರ್ಯಾಚರಿಸುವ ಯಾರೇ ಆದರೂ ಭಾರತೀಯ ನೌಕಾಪಡೆಗೆ ಮುಂಚಿತವಾಗಿ ತಿಳಿಸಬೇಕಾಗುತ್ತದೆ 'ಎಂದು ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್‌ಬ್ಲೇರ್ ಸಮೀಪ ಭಾರತೀಯ ಜಲಪ್ರದೇಶದಲ್ಲಿ ಚೀನಾದ ಹಡಗು ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿದ್ದನ್ನು ಅಲ್ಲಿ ಕಾರ್ಯಾಚರಿಸುತ್ತಿದ್ದ ಸಮುದ್ರ ಕಣ್ಗಾವಲು ವಿಮಾನವು ಪತ್ತೆ ಹಚ್ಚಿತ್ತು.

ಅಂಡಮಾನ್ ಪ್ರದೇಶದಲ್ಲಿ ಭಾರತದ ಚಟುವಟಿಕೆಗಳ ಬೇಹುಗಾರಿಕೆಗಾಗಿಯೂ ಈ ಹಡಗನ್ನು ಬಳಸುತ್ತಿದ್ದ ಸಾಧ್ಯತೆಯಿದೆ ಎಂದು ಸರಕಾರದ ಮೂಲಗಳು ತಿಳಿಸಿದವು.

 ಚೀನಾದ ಹಡಗು ಪತ್ತೆಯಾದ ಬಳಿಕ ಅದರ ಮೇಲೆ ನಿಗಾಯಿರಿಲು ಭಾರತೀಯ ನೌಕಾಪಡೆಯ ಯುದ್ಧನೌಕೆಯನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ವಿದೇಶಗಳು ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಯಾವುದೇ ಸಂಶೋಧನಾ ಅಥವಾ ಅನ್ವೇಷಣಾ ಚಟುವಟಿಕೆಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲದ್ದರಿಂದ ಭಾರತೀಯ ಯುದ್ಧನೌಕೆಯು ಭಾರತೀಯ ಜಲಪ್ರದೇಶದಿಂದ ಹೊರಕ್ಕೆ ಹೋಗುವಂತೆ ಶಿ ಯಾನ್ 1 ಹಡಗಿಗೆ ಎಚ್ಚರಿಕೆ ನೀಡಿತ್ತು. ನಂತರ ಅದು ಭಾರತೀಯ ಜಲಪ್ರದೇಶದಿಂದ ಚೀನಾದತ್ತ ವಾಪಸಾಗಿತ್ತು ಎಂದು ಈ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News