ಬಜ್ಪೆ ಗ್ರಾಪಂನಲ್ಲಿ ಮಕ್ಕಳ ಗ್ರಾಮಸಭೆ

Update: 2019-12-03 16:59 GMT

ಬಜ್ಪೆ, ಡಿ.3: ಬಜ್ಪೆವ್ಯಾಪ್ತಿಯ ಅನುದಾನಿತ, ಸರಕಾರಿ, ಖಾಸಗಿ ಶಾಲೆಗಳ ‘ಮಕ್ಕಳ ಗ್ರಾಮಸಭೆ’ಯು ಸೋಮವಾರ ಬಜ್ಪೆಗ್ರಾಪಂ ಸಮುದಾಯ ಭವನದ ಬಳಿ ನಡೆಯಿತು.

ಸಭೆಯಲ್ಲಿ ಬಜ್ಪೆಯ ಪರೋಕಿಯಲ್ ಅನುದಾನಿತ ಹಿಪ್ರಾ. ಶಾಲೆ, ಸೈಂಟ್ ಜೋಸೆಫ್, ಅನ್ಸಾರ್ ಆಂಗ್ಲಮಾಧ್ಯಮ, ಮೋರ್ನಿಂಗ್ ಸ್ಟಾರ್ ಆಂಗ್ಲಮಾಧ್ಯಮ, ಲಿಟ್ಲ್ ಫ್ಲವರ್ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಹಲವು ಸಮಸ್ಯೆ ಮುಂದಿಟ್ಟು, ಪರಿಹಾರ ಕ್ಕಾಗಿ ಮನವಿ ಮಾಡಿಕೊಂಡರು.

ವಿದ್ಯಾರ್ಥಿಗಳ ದೂರು: ಬಿಸಿಯೂಟದ ಅಕ್ಕಿ ಗುಣಮಟ್ಟ ಉತ್ತಮವಾಗಿಲ್ಲ ಎಂದು ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಗಳು ದೂರು ನೀಡಿದರೆ, ವಸತಿ ಶಾಲೆಯ ಮಕ್ಕಳಿಗೆ ಸೈಕಲ್ ನೀಡಿಲ್ಲ, ಪರೋಕಿಯಲ್ ಶಾಲೆಯ ಹಿಂದಿನಿಂದ ದುರ್ವಾಸನೆ ಬೀರುತ್ತಿದೆ, ಬೀದಿನಾಯಿಗಳ ಕಾಟ ಹೆಚ್ಚಾಗಿದೆ, ಶಾಲೆಯ ಎದುರು ಹಂಪ್ಸ್ ಅಳವಡಿಸಬೇಕು, ಸೈಕಲ್ ಗುಣಮಟ್ಟ ಉತ್ತಮ ವಾಗಿಲ್ಲ, ಸೀಸಿ ಟೀವಿ ಕ್ಯಾಮರಾ ಅಳವಡಿಸಬೇಕು, ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ, ಕತ್ತಲ್‌ಸಾರ್‌ಗೆ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ಶಾಲಾ ಮಕ್ಕಳು ದೂರಿತ್ತರು.

ಹಿಂದಿನ ವರ್ಷದಲ್ಲಿ ಶಾಲಾ ಮಕ್ಕಳಿಂದ ಕೇಳಿ ಬಂದಿದ್ದ ಪ್ರಶ್ನೆಗಳಿಗೆ ಒಂದು ವರ್ಷದಲ್ಲಿ ಸಾಕಷ್ಟು ಪರಿಹಾರ ನೀಡಲಾಗಿದೆ. ರಸ್ತೆಗೆ ಹಂಪ್ಸ್, ಎಚ್ಚರಿಕೆ ಫಲಕ ಅಳವಡಿಸುವ ವಿಷಯ ತಾಂತ್ರಿಕ ಕಾರಣಗಳಿಂದ ಅಪೂರ್ಣವಾಗಿದೆ ಎಂದು ‘ಅನುಪಾಲನಾ ವರದಿ’ ವಾಚಿಸಿದ ಬಜ್ಪೆಪಿಡಿಒ ಸಾಯೀಶ್ ಚೌಟ, ಈ ಬಾರಿ ಕೇಳಿ ಬಂದಿರುವ ದೂರುಗಳಿಗೆ ಪಂಚಾಯತ್ ಆಡಳಿತದಲ್ಲಿ ಪ್ರಸ್ತಾವಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳ ಬಗ್ಗೆ ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಮಾಹಿತಿ ನೀಡಿ ಅಪೌಷ್ಠಿಕತೆ ನೀಗಿಸಲು ಸರಕಾರ ಅಂಗನವಾಡಿಗಳ ಮೂಲಕ ಗರ್ಭಿಣಿಯರು ಮತ್ತು ಮಕ್ಕಳಿಗೆ ಸಾಕಷ್ಟು ಪೌಷ್ಠಿಕ ಆಹಾರ ಒದಗಿಸುತ್ತಿದೆ. ಬಿಪಿಎಲ್ ಕುಟುಂಬಗಳ ಹೆಣ್ಮಕ್ಕಳ ಶಿಕ್ಷಣಕ್ಕೆ ಭಾಗ್ಯಲಕ್ಷ್ಮಿಯಂತಹ ಉತ್ತಮ ಯೋಜನೆ ಅನುಷ್ಠಾನಗೊಳಿಸಿದೆ ಎಂದರು.

ಉಪನ್ಯಾಸಕಿ ಭಾರತಿ ಮಾತನಾಡಿ ಇಲ್ಲಿನ ಮಕ್ಕಳು ವಾಸ್ತವ ಹಲವು ಮಹತ್ವದ ಪ್ರಶ್ನೆ ಕೇಳಿದ್ದಾರೆ. ಮಕ್ಕಳು ಉತ್ತಮ ಗುಣ ಬೆಳೆಸಿಕೊಳ್ಳಬೇಕು. ಪಾಲಕರು ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಕಾನೂನಿನಲ್ಲಿ ಸಡಿಲಿಕೆ ಬದಲಾಗಿ, ಕಾನೂನು ಕಠಿಣಗೊಳಿಸುವ ನಿಟ್ಟಿನಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಪ್ರತಿಶತ ಅನುಷ್ಠಾನಕ್ಕೆ ತಂದಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗಿನ ಅಪರಾಧ ಕೃತ್ಯಗಳು ಕಡಿಮೆಯಾಗಲಿವೆ ಎಂದರು.

ಬಜ್ಪೆ ಪೊಲೀಸ್ ಠಾಣಾ ಅಧಿಕಾರಿ ದೇವು ಶೆಟ್ಟಿ ಮಾತನಾಡಿ, ಪೊಕ್ಸೋ ಕಾಯ್ದೆ ಮೂಲಕ ಸಾಕಷ್ಟು ಅಪರಾಧ ನಿಯಂತ್ರಣಕ್ಕೆ ಬಂದಿದೆ. ಶಾಲಾ ವಠಾರದಲ್ಲಿ ಮಕ್ಕಳು ಗಾಂಜಾ, ಬೀಡಿ-ಸಿಗರೇಟು ಸೇದುತ್ತಿದ್ದರೆ ಮಕ್ಕಳೇ ಪೊಲೀಸರ ಗಮನ ಹರಿಸಬೇಕು. ಈ ರೀತಿಯ ಇಂತಹ ‘ಜನಸ್ನೇಹಿ’ ಕೆಲಸದಿಂದ ಸಮಾಜದಲ್ಲಿ ಅಪರಾಧ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಣ ಇಲಾಖೆಯ ಅಧಿಕಾರಿ ಪ್ರಭಾ ಮತ್ತು ಆರೋಗ್ಯ ಇಲಾಖೆ ಅಧಿಕಾರಿ ಸಾವಿತ್ರಿ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಮಕ್ಕಳು ಕಲಿಕೆಯೊಂದಿಗೆ ಶಿಸ್ತು, ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದು ರಾಮಚಂದ್ರ ಮಿಜಾರ್ ಮಕ್ಕಳಿಗೆ ಕಿವಿ ಮಾತನ್ನಾಡಿದರು.

ಅಧ್ಯಕ್ಷತೆ ವಹಿಸಿದ ಬಜ್ಪೆಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಶರೀಫ್ ಮಾತನಾಡಿ, ಪಂಚಾಯತ್ ಆಡಳಿತವು ಶಾಲೆಗಳಿಗೆ ಸಂಬಂಧಿಸಿದಂತೆ ಉತ್ತಮ ಕೆಲಸ ಮಾಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಬಜ್ಪೆವ್ಯಾಪ್ತಿಯ ಶಾಲಾ ಮಕ್ಕಳಿಗೆ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರು ಹಾಗೂ ಶಾಲೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಟ್ರೋಫಿ, ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು. ಪಿಡಿಒ ಸಾಯೀಶ್ ಚೌಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News