ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದ ಭಯಾನಕ ಚಂಡಮಾರುತ ‘ಕಮ್ಮೂರಿ’: 3.40 ಲಕ್ಷ ಜನರ ಸ್ಥಳಾಂತರ

Update: 2019-12-03 17:00 GMT

ಮನಿಲಾ (ಫಿಲಿಪ್ಪೀನ್ಸ್), ಡಿ. 3: ಭಯಾನಕ ಗಾಳಿ ಮತ್ತು ಭಾರೀ ಮಳೆಯೊಂದಿಗೆ ‘ಕಮ್ಮೂರಿ’ ಚಂಡಮಾರುತವು ಮಂಗಳವಾರ ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದೆ. ಲಕ್ಷಾಂತರ ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಹಾಗೂ ಸುರಕ್ಷತಾ ಬೆದರಿಕೆಯ ಹಿನ್ನೆಲೆಯಲ್ಲಿ ರಾಜಧಾನಿ ಮನಿಲಾದಲ್ಲಿರುವ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

ಸೋಮವಾರ ರಾತ್ರಿ ಶಕ್ತಿಶಾಲಿ ಚಂಡಮಾರುತದಿಂದ ಉದ್ಭವಿಸಿದ ಭಯಾನಕ ಗಾಳಿಯು ಮನೆಗಳು ಮತ್ತು ಕಟ್ಟಡಗಳ ಮೇಲ್ಛಾವಣಿಗಳನ್ನು ಚಿಂದಿ ಉಡಾಯಿಸಿತು ಹಾಗೂ ಅದು ಮನಿಲಾದ ದಕ್ಷಿಣ ಭಾಗದ ಮೂಲಕ ಹಾದು ಹೋಗಿದೆ. ಮನಿಲಾದಲ್ಲಿ ಸುಮಾರು 1.3 ಕೋಟಿ ಜನರು ವಾಸಿಸುತ್ತಿದ್ದಾರೆ. ಅದೂ ಅಲ್ಲದೆ, ಪ್ರಾದೇಶಿಕ ಆಗ್ನೇಯ ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಬಂದಿರುವ ಸಾವಿರಾರು ಕ್ರೀಡಾಳುಗಳಿದ್ದಾರೆ.

ಚಂಡಮಾರುತವು ದುರ್ಬಲಗೊಂಡರೂ ವಿನಾಶಗಳನ್ನು ಸೃಷ್ಟಿಸುವಷ್ಟು ಪ್ರಬಲವಾಗಿದೆ ಹಾಗೂ ಅದು ಪ್ರಸಕ್ತ ಗಂಟೆಗೆ 150 ಕಿ.ಮೀ. ವೇಗದ ಗಾಳಿಯನ್ನು ಸೃಷ್ಟಿಸುತ್ತಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಸುಮಾರು 500 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

ಫಿಲಿಪ್ಪೀನ್ಸ್‌ನ ಮಧ್ಯ ಭಾಗದ ಬೈಕೊಲ್ ವಲಯದಲ್ಲಿ ಸುಮಾರು 3.40 ಲಕ್ಷ ಜನರನ್ನು ಅವರ ಮನೆಗಳಿಂದ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News