ನಿತ್ಯಾನಂದನಿಂದ ಹೊಸ ದೇಶ 'ಕೈಲಾಸ' ಸ್ಥಾಪನೆ!

Update: 2019-12-04 07:37 GMT

ಹೊಸದಿಲ್ಲಿ, ಡಿ.3: ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಇತ್ತೀಚೆಗೆ ಭಾರತದಿಂದ ಪರಾರಿಯಾದ ಬಳಿಕ ಇಕ್ವೆಡಾರ್‌ ನಲ್ಲಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ತನ್ನ ‘ಸ್ವಂತ ದೇಶ’ ನಿರ್ಮಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ.

ಇಕ್ವೆಡಾರ್‌ ನಲ್ಲಿ ಖರೀದಿಸಿರುವ ದ್ವೀಪಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿರುವ ನಿತ್ಯಾನಂದ, ಇಲ್ಲಿ ತನ್ನ ಸ್ವಂತ ದೇಶವನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಈ ರಾಷ್ಟ್ರಕ್ಕೆ ಪ್ರಧಾನಿ ನೇತೃತ್ವದ ಸಚಿವ ಸಂಪುಟವನ್ನು ನೇಮಿಸಿದ್ದು ರಾಷ್ಟ್ರದ ಧ್ವಜ, ಪಾಸ್ ಪೋರ್ಟ್ ಹಾಗೂ ಲಾಂಛನದ ವಿನ್ಯಾಸ ಈಗಾಗಲೇ ಸಿದ್ಧವಾಗಿದೆ ಎಂದು ವರದಿ ತಿಳಿಸಿದೆ. ಟ್ರಿನಿಡಾಡ್ ಮತ್ತು ಟೊಬಾಗ್ಯೊದ ಸನಿಹವಿರುವ ಈ ದ್ವೀಪವನ್ನು ಹಿಂದು ಸಾರ್ವಭೌಮ ರಾಷ್ಟ್ರವೆಂದು ಈಗಾಗಲೇ ಘೋಷಿಸಲಾಗಿದೆ.

ದೇವಸ್ಥಾನ ಆಧರಿತ ಪರಿಸರ ವ್ಯವಸ್ಥೆ, ಮೂರನೇ ಕಣ್ಣಿನ ಹಿಂದಿರುವ ವಿಜ್ಞಾನ, ಯೋಗ, ಧ್ಯಾನ ಮತ್ತು ಗುರುಕುಲ ಶಿಕ್ಷಣ ವ್ಯವಸ್ಥೆ ಈ ಹೊಸ ದೇಶದಲ್ಲಿರುತ್ತದೆ. ಸಾರ್ವತ್ರಿಕ ಉಚಿತ ಆರೋಗ್ಯ ವ್ಯವಸ್ಥೆ, ಉಚಿತ ಶಿಕ್ಷಣ ಮತ್ತು ಎಲ್ಲರಿಗೂ ಉಚಿತ ಆಹಾರ ಇದರ ವೈಶಿಷ್ಟವಾಗಿದೆ ಎಂದು ಆಶ್ರಮದ ವೆಬ್‌ಸೈಟ್‌ ನಲ್ಲಿ ತಿಳಿಸಲಾಗಿದೆ. ದೇಣಿಗೆ ನೀಡಿ ಈ ದೇಶದ ಪೌರತ್ವ ಪಡೆಯುವಂತೆ ನಿತ್ಯಾನಂದ ವಿಶ್ವದಾದ್ಯಂತದ ಜನರಿಗೆ ಈ ವೆಬ್‌ ಸೈಟ್ ಮೂಲಕ ಕರೆ ನೀಡಿದ್ದಾನೆ.

ತಮಿಳುನಾಡು ಮೂಲದ ನಿತ್ಯಾನಂದನ ವಿರುದ್ಧ ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ದಾಖಲಾಗಿದ್ದು, ಇತ್ತೀಚೆಗೆ ದೇಶದಿಂದ ಪಲಾಯನ ಮಾಡಿ ತಲೆಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News