ಮಸೀದಿ ಆಡಳಿತ ಸಮಿತಿಗಳು ವಕ್ಫ್ ಕಾನೂನು ಅನುಸರಿಸಬೇಕು: ಯು.ಕೆ.ಮೋನು ಮನವಿ

Update: 2019-12-04 08:47 GMT

ಮಂಗಳೂರು, ಡಿ.4: ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಕಾನೂನು ಜಾರಿಗೆ ಬಂದಿದ್ದು, ಅದರಂತೆ ಪ್ರತಿ ವಕ್ಫ್ ಸಂಸ್ಥೆಯೂ ಮಂಡಳಿಯ ಮಾದರಿ ನಿಯಮಾವಳಿಯಂತೆ ಆಡಳಿತ ಸಮಿತಿ ರಚಿಸಿ ಮೂರು ವರ್ಷದ ಅವಧಿಗೆ ಅಂಗೀಕಾರ ಪಡೆದುಕೊಳ್ಳಬೇಕು. ಎಲ್ಲ ಮಸೀದಿ ಆಡಳಿತ ಸಮಿತಿಯವರೂ ಇದನ್ನು ಅನುಸರಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ.ಮೋನು ತಿಳಿಸಿದ್ದಾರೆ.

 ಸಮಿತಿ ಸದಸ್ಯರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 628 ಮಸೀದಿಗಳಿದ್ದು, ವಕ್ಫ್ ಸಂಸ್ಥೆಗಳಾದ ಮಸೀದಿ, ಮದ್ರಸ, ದರ್ಗಾ, ಖಬರಸ್ಥಾನ್‌ಗಳಿಗೆ ನಿಯಮ ಅನ್ವಯ, ಇದುವರೆಗೆ ಸುಮಾರು 254 ಸಂಸ್ಥೆಗಳು ಮಾದರಿ ನಿಯಮಾವಳಿಗೆ ಅಂಗೀಕಾರ ಪಡೆದುಕೊಂಡಿದ್ದಾರೆ ಎಂದರು.

 ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ನಡವಳಿಯಂತೆ ಎಲ್ಲ ವಕ್ಫ್ ಸಂಸ್ಥೆಯ ಮದ್ರಸಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿಯಂತೆ ಸಲಹಾ ಪೆಟ್ಟಿಗೆ ಇರಿಸಬೇಕು. ಅಲ್ಲದೆ ಮಕ್ಕಳ ಹಕ್ಕುಗಳ ಸಮಿತಿಗಳನ್ನು ರಚಿಸಬೇಕು, ಈ ಬಗ್ಗೆ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದರು.

ಭಿನ್ನಾಭಿಪ್ರಾಯ ಶಮನಕ್ಕೆ ಯತ್ನ
 ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸುನ್ನಿ ಸಮುದಾಯದ ಎ.ಪಿ. ಹಾಗೂ ಇ.ಕೆ. ಬಣದ ಪ್ರಮುಖರನ್ನು, ಉಲಮಾ ಮಂಡಳಿಯ ಸಭೆಯನ್ನು ರಾಜ್ಯ ವಕ್ಫ್ ಮಂಡಳಿ ನಿರ್ದೇಶನದಂತೆ ಕರೆಯಲಾಗಿದೆ. ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಇದಕ್ಕೆ ಒಳ್ಳೆಯ ಸ್ಪಂದನ ಸಿಕ್ಕಿದೆ ಎಂದರು.

ಮಂಗಳೂರು ನಗರದ ಬೆಂಗ್ರೆ ಕಸಬಾ ಗ್ರಾಮದಲ್ಲಿ ಮುಸ್ಲಿಮರಿಗೆ ದಫನ ಭೂಮಿಯ ಕೊರತೆ ಇದ್ದು, ಅದಕ್ಕಾಗಿ ಹಿಂದಿನ ಜಿಲ್ಲಾಧಿಕಾರಿ 3.95 ಎಕ್ರೆ ಭೂಮಿ ಮಂಜೂರು ಮಾಡಿದ್ದಾರೆ. ಅದರ ಆವರಣ ಗೋಡೆಯ ಕೆಲಸ ಪೂರ್ಣಗೊಂಡಿದ್ದು ಮೂಲ ಸೌಕರ್ಯ ಅಭಿವೃದ್ಧಿಗಾಗಿ 25 ಸಾವಿರ ರೂ. ಮಂಜೂರಾಗಿದೆ. ಗುರುಪುರ ಹೋಬಳಿಯ ಅರ್ಕುಳ, ಅಡ್ಯಾರು ಗ್ರಾಮಗಳಲ್ಲಿ ಸುಮಾರು 16 ಎಕರೆಯಷ್ಟು ವಕ್ಫ್ ಸಮಿತಿಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಸರ್ವೆ ಮಾಡಿ, ಮರುಸ್ವಾಧೀನ ಪಡಿಸಿಕೊಂಡು ಪಹಣಿ ಪತ್ರದಲ್ಲಿ ವಕ್ಫ್ ಸೊತ್ತು ಎಂದು ದಾಖಲಿಸಲಾಗಿದೆ. ಕಸಬಾ ಬಜಾರ್ ಗ್ರಾಮದ ಕಚ್ಚಿ ಮೆಮನ್ ಮಸೀದಿ ಅಧೀನದ 69 ಸೆಂಟ್ಸ್ ಸ್ಥಳವನ್ನು ರವಿಶಂಕರ್ ಮಿಜಾರ್ ಎಂಬವರು ಅಕ್ರಮ ಒತ್ತುವರಿ ಮಾಡಿಕೊಂಡಿರುವುದರ ಬಗ್ಗೆ ವ್ಯಾಜ್ಯವು ಮೈಸೂರು ವಕ್ಫ್ ಟ್ರಿಬ್ಯುನಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಮೋನು ತಿಳಿಸಿದರು.

ಸಮಿತಿಯ ಶಾಹುಲ್ ಹಮೀದ್, ನೂರುದ್ದೀನ್ ಸಾಲ್ಮರ, ಉಸ್ಮಾನ್ ಕರೋಪಾಡಿ, ಡಿ.ಎಂ. ಅಸ್ಲಂ, ಮುಸ್ತಫ ಸುಳ್ಯ ಉಪಸ್ಥಿತರಿದ್ದರು.


ಕೆಂಜಾರಿನಲ್ಲಿ ಹಜ್ ಭವನ ಪ್ರಸ್ತಾವ
ಮಂಗಳೂರು ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿರಬೇಕು ಎಂಬ ಕಾರಣಕ್ಕಾಗಿ ಕೆಂಜಾರಿನಲ್ಲಿ 2 ಎಕರೆ ಜಾಗವನ್ನು ಹಜ್ ಭವನ ನಿರ್ಮಾಣಕ್ಕೆ ಗುರುತಿಸಿದ್ದು, ಸರಕಾರವೂ ಅನುಮೋದನೆ ನೀಡಿದೆ. ಮುಂದೆ ಅದರ ನಿರ್ಮಾಣ ಕಾರ್ಯ ಹಂತ ಹಂತವಾಗಿ ನಡೆಯಲಿದೆ ಎಂದು ಯು.ಕೆ. ಮೋನು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News