ಮಹಿಳಾ ದೌರ್ಜನ್ಯ ಖಂಡಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್‌ನಿಂದ ಪ್ರತಿಭಟನೆ

Update: 2019-12-04 08:51 GMT

ಮಂಗಳೂರು, ಡಿ.4: ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ಖಂಡಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ (ವಿಮ್) ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಮಹಿಳೆಯರ ಮೇಲಿನ ದೌರ್ಜನ್ಯದಿಂದ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುತ್ತಿದೆ. ಬಾಲಕಿಯರು, ಯುವತಿಯರು, ಮಹಿಳೆಯರ ಬದುಕು ಅತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ದೇಶದ ಮಹಿಳೆಯರ ಭದ್ರತೆಗೆ ಸರಕಾರ ವಿಶೇಷ ಆದ್ಯತೆ ನೀಡಬೇಕು. ಅತ್ಯಾಚಾರದ ಬಗ್ಗೆ ತ್ವರಿತ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅಶ್ಲೀಲ ಜಾಲತಾಣಗಳು, ಸಿನೆಮಾಗಳು, ಅಮಲು ಪದಾರ್ಥ ಮತ್ತು ಮಾದಕ ದ್ರವ್ಯಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಹಾರ ಸಾಮಗ್ರಿಗಳ, ಔಷಧಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ರೈತರನ್ನು ಶೋಷಿಸುವ ಕಾಳಸಂತೆಕೋರರು ಮತ್ತು ದಲ್ಲಾಳಿಗಳನ್ನು ನಿಯಂತ್ರಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬಾಂಬ್ ಸ್ಫೋಟದ ಆರೋಪಿಯೂ ಆಗಿರುವ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ರಾಷ್ಟ್ರಪಿತನ ಕೊಲೆಯನ್ನು ಸಮರ್ಥಿಸಿದ್ದು ಖಂಡನೀಯ. ಹಾಗಾಗಿ ಆಕೆಯ ಸಂಸತ್ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭ ವಿಮ್ ಜಿಲ್ಲಾ ಕಾರ್ಯದರ್ಶಿ ರುಬಿಯಾ, ರಾಜ್ಯ ಸಮಿತಿ ಸದಸ್ಯೆ ಆಯಿಶಾ ಬಜ್ಪೆ, ಸಫಿಯಾ ಬೆಂಗರೆ, ಮರಿಯಮ್ಮ ಬೆಳ್ತಂಗಡಿ, ಝಹನಾ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News