ಇನ್ನು ಸುಂದರ ಪಿಚೈ ‘ಆಲ್ಫಾಬೆಟ್’ ಸಿಇಒ

Update: 2019-12-04 15:06 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಡಿ. 4: ಅಮೆರಿಕದ ತಂತ್ರಜ್ಞಾನ ದೈತ್ಯ ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಂದರ ಪಿಚೈಯನ್ನು ಕಂಪೆನಿಯ ಮಾತೃಸಂಸ್ಥೆ ‘ಆಲ್ಫಾಬೆಟ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ.

ಆಲ್ಫಾಬೆಟ್‌ನ ಹಾಲಿ ಸಿಇಒ ಹಾಗೂ ಗೂಗಲ್ ಸಹಸಂಸ್ಥಾಪಕ ಲ್ಯಾರಿ ಪೇಜ್ ಅಧಿಕಾರದಿಂದ ಕೆಳಗಿಳಿಯುತ್ತಿದ್ದು, ಜಗತ್ತಿನ ಅತ್ಯಂತ ಮೌಲ್ಯಯುತ ಕಂಪೆನಿಗಳ ಪೈಕಿ ಒಂದಾಗಿರುವ ಕಂಪೆನಿಯಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿವೆ.

ಲ್ಯಾರಿ ಪೇಜ್ ಮತ್ತು ಗೂಗಲ್‌ನ ಇನ್ನೋರ್ವ ಸಹಸಂಸ್ಥಾಪಕ ಸರ್ಗಿ ಬ್ರಿನ್ ಇನ್ನು ಮುಂದೆ ಆಲ್ಫಾಬೆಟ್‌ನ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ, ಆದರೆ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿನ ತಮ್ಮ ಸ್ಥಾನಗಳನ್ನು ಅವರು ಉಳಿಸಿಕೊಳ್ಳುತ್ತಾರೆ ಎಂದು ಮಂಗಳವಾರ ಪ್ರಕಟನೆಯೊಂದು ತಿಳಿಸಿದೆ. ಬ್ರಿನ್ ಆಲ್ಫಾಬೆಟ್‌ನ ಅಧ್ಯಕ್ಷರಾಗಿದ್ದಾರೆ.

‘‘ಕಂಪೆನಿಯನ್ನು ನಡೆಸಲು ಉತ್ತಮ ವಿಧಾನಗಳಿವೆ ಎಂದು ನಾವು ಭಾವಿಸಿದಾಗ, ಆಡಳಿತದ ಹುದ್ದೆಗಳಿಗೆ ಅಂಟಿಕೊಳ್ಳುವವರು ನಾವಲ್ಲ’’ ಎಂದು ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಪೇಜ್ ಮತ್ತು ಬ್ರಿನ್ ಹೇಳಿದ್ದಾರೆ.

‘‘ಸುಂದರ ಪಿಚೈ ಪ್ರತಿ ದಿನ ಬಳಕೆದಾರರು, ಭಾಗೀದಾರರು ಮತ್ತು ನಮ್ಮ ಉದ್ಯೋಗಿಗಳಲ್ಲಿ ವಿನೀತ ಭಾವನೆ ಮತ್ತು ತಂತ್ರಜ್ಞಾನದ ಬಗ್ಗೆ ಗಾಢ ಮೋಹವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ’’ ಎಂದು ಅವರು ಬರೆದಿದ್ದಾರೆ. ‘‘ಹಾಗಾಗಿ, ಗೂಗಲ್ ಮತ್ತು ಆಲ್ಫಾಬೆಟನ್ನು ಭವಿಷ್ಯದಲ್ಲಿ ಮುನ್ನಡೆಸಲು ಅವರಿಗಿಂತ ಬೇರೆ ವ್ಯಕ್ತಿ ಇನ್ನೊಬ್ಬರಿಲ್ಲ’’ ಎಂದಿದ್ದಾರೆ.

ಆಲ್ಫಾಬೆಟನ್ನು 2015ರಲ್ಲಿ ಸ್ಥಾಪಿಸಲಾಯಿತು ಹಾಗೂ ಆ ಮೂಲಕ ಗೂಗಲ್‌ನ ಅನನ್ಯತೆಯನ್ನು ಉಳಿಸಿಕೊಳ್ಳಲಾಯಿತು. ಈಗ ಆಲ್ಫಾಬೆಟ್ ಅಡಿಯಲ್ಲಿ ಗೂಗಲ್, ಸ್ವಯಂಚಾಲಿತ ಕಾರು ನಿರ್ಮಾಣ ಘಟಕ ವಯ್ಮಾ ಮತ್ತು ಸ್ಮಾರ್ಟ್ ಸಿಟಿ ನಿರ್ಮಾಣ ಸಮೂಹ ಸೈಡ್‌ವಾಕ್ ಲ್ಯಾಬ್ಸ್ ಬರುತ್ತದೆ.

ಮಧುರೈಯಿಂದ ಆಲ್ಫಾಬೆಟ್ ಸಿಇಒವರೆಗೆ

ಸುಂದರ ಪಿಚೈ 47 ವರ್ಷಗಳ ಹಿಂದೆ ತಮಿಳುನಾಡಿನ ಮಧುರೈಯಲ್ಲಿ ಜನಿಸಿದರು. ಅವರು ಕರಗಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಇಂಜಿನಿಯರಿಂಗ್ ಕಲಿತರು.

ಬಳಿಕ ಅಮೆರಿಕಕ್ಕೆ ತೆರಳಿದ ಅವರು ಸ್ಟಾನ್‌ಫೋರ್ಟ್ ವಿಶ್ವವಿದ್ಯಾನಿಲಯ ಹಾಗೂ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ವಾರ್ಟನ್ ಸ್ಕೂಲ್‌ನಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.

ಅವರು 2004ರಲ್ಲಿ ಗೂಗಲ್ ಕಂಪೆನಿಯನ್ನು ಸೇರಿದರು ಹಾಗೂ 2015ರಲ್ಲಿ ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದರು.

ರೋಮಾಂಚನಗೊಂಡಿದ್ದೇನೆ: ಸುಂದರ ಪಿಚೈ

ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿರುವುದಕ್ಕಾಗಿ ಗೂಗಲ್ ಸಿಇಒ ಸುಂದರ ಪಿಚೈ ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗಿ ಬ್ರಿನ್‌ರಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘‘ಬೃಹತ್ ಸವಾಲುಗಳನ್ನು ತಂತ್ರಜ್ಞಾನದ ಮೂಲಕ ನಿಭಾಯಿಸುವ ನಿಟ್ಟಿನಲ್ಲಿ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಹಾಕಿಕೊಂಡಿರುವ ದೀರ್ಘಾವಧಿ ಯೋಜನೆಗಳ ಬಗ್ಗೆ ನಾನು ರೋಮಾಂಚನಗೊಂಡಿದ್ದೇನೆ. ಕೃತಜ್ಞತೆಗಳು ಲ್ಯರಿ ಮತ್ತು ಸರ್ಗಿ. ನಾವು ಕಾಲಮಿತಿಯಲ್ಲದ ಯೋಜನೆಗಳು, ಶಾಶ್ವತ ಮೌಲ್ಯಗಳು ಹಾಗೂ ಸಹಯೋಗ ಮತ್ತು ಸಂಶೋಧನೆಯ ಸಂಸ್ಕೃತಿಯನ್ನು ಹೊಂದಿದ್ದೇವೆ. ಇದು ಬಲಿಷ್ಠ ಬುನಾದಿಯಾಗಿದ್ದು ನಾವು ಅದರ ಮೇಲೆ ನಿರ್ಮಾಣ ಕಾರ್ಯಗಳನ್ನು ನಡೆಸುತ್ತೇವೆ’’ ಎಂದು ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News