ದ.ವಲಯ ಅಂತರ ವಿವಿ ಮಹಿಳಾ ಬ್ಯಾಡ್ಮಿಂಟನ್ : ಜೈನ್, ಕಲ್ಲಿಕೋಟೆ, ಆಂಧ್ರ, ಎಸ್‌ಆರ್‌ಎಂ ವಿವಿ ಸೆಮಿಫೈನಲಿಗೆ

Update: 2019-12-04 16:02 GMT

ಮಣಿಪಾಲ, ಡಿ.3: ಯಾವುದೇ ಅಚ್ಚರಿಯ ಫಲಿತಾಂಶಗಳಿಲ್ಲದೇ ನಿರೀಕ್ಷೆ ಯಂತೆಯೇ ಸಾಗಿದ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಳೆದ ವರ್ಷದ ನಾಲ್ಕು ತಂಡಗಳೇ ಈ ಬಾರಿಯೂ ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ವಿವಿಯ ಒಳಾಂಗಣ ಕ್ರೀಡಾ ಸಂಕೀರ್ಣ ‘ಮರೆನಾ’ದಲ್ಲಿ ನಡೆದಿರುವ ಟೂರ್ನಿಯ ಇಂದಿನ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಬೆಂಗಳೂರಿನ ಜೈನ್ ವಿವಿ, ಚೆನ್ನೈನ ಎಸ್‌ಆರ್‌ಎಂ, ಕೇರಳದ ಕಲ್ಲಿಕೋಟೆ ವಿವಿ ಹಾಗೂ ಆಂಧ್ರ ಪ್ರದೇಶದ ಆಂಧ್ರ ವಿವಿ ತಂಡಗಳು ಏಕಪಕ್ಷೀಯ ಜಯಗಳಿಸಿ ಅಂತಿಮ ನಾಲ್ಕರ ಹಂತವನ್ನೇರಿವೆ.

ನಾಳೆ ಬೆಳಗ್ಗೆ 9 ಗಂಟೆಗೆ ಮರೆನಾದಲ್ಲಿ ನಡೆಯುವ ಸೆಮಿಫೈನಲ್ ಪಂದ್ಯ ಗಳಲ್ಲಿ ಚಾಂಪಿಯನ್ ಬಲಿಷ್ಠ ಜೈನ್ ವಿವಿ, ಆಂಧ್ರ ವಿವಿಯನ್ನು ಎದುರಿಸಿದರೆ, ರನ್ನರ್‌ಅಪ್ ಕಲ್ಲಿಕೋಟೆ ವಿವಿ ತಂಡ, ಎಸ್‌ಆರ್‌ಎಂ ವಿವಿಯನ್ನು ಎದುರಿಸಿ ಆಡಲಿವೆ. ಫೈನಲ್ ಪಂದ್ಯ ಅಪರಾಹ್ನ 1 ಗಂಟೆಗೆ ನಡೆಯಲಿದೆ.

ಇಂದಿನ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ನಾಲ್ಕು ತಂಡಗಳೂ ತಮ್ಮ ಎದುರಾಳಿಗಳ ವಿರುದ್ಧ 2-0 ಅಂತರದ ಜಯವನ್ನು ದಾಖಲಿಸಿದವು. ಇದರಿಂದ ಯಾವುದೇ ತಂಡಕ್ಕೂ ಎರಡನೇ ಡಬಲ್ಸ್ ಪಂದ್ಯವನ್ನಾಡುವ ಅಗತ್ಯ ಬೀಳಲೇ ಇಲ್ಲ.
ಜೈನ್ ತಂಡದ ಅಂತಾರಾಷ್ಟ್ರೀಯ ಆಟಗಾರ್ತಿ ಶೀಖಾ ರಾಜೇ ಗೌತಮ್ ಅವರು ತನ್ನ ಎದುರಾಳಿ ಉಸ್ಮಾನಿಯಾ ವಿವಿಯ ಕೆ.ವೈಷ್ಣವಿ ಅವರಿಂದ ಮೊದಲ ಗೇಮ್‌ನಲ್ಲಿ ತೀವ್ರ ಪ್ರತಿರೋಧ ಎದುರಿಸಿದರು. ಮೊದಲ ಗೇಮ್‌ನ್ನು ವೈಷ್ಣವಿ ಗೆಲ್ಲುವ ಮೂಲಕ ಅಚ್ಚರಿಯ ಫಲಿತಾಂಶದ ಸೂಚನೆ ನೀಡಿದರೂ, ಗೌತಮ್ ತಮ್ಮ ಅನುಭವವನ್ನು ಧಾರೆ ಎರೆದು ಮುಂದಿನ ಎರಡೂ ಗೇಮ್‌ಗಳನ್ನು ಜಯಿಸಿ ತಂಡಕ್ಕೆ ಮುನ್ನಡೆ ನೀಡಿದರು. ಮುಂದಿನ ಡಬಲ್ಸ್‌ನಲ್ಲಿ ಶಿಖಾ ಅವರು ಅಶ್ವಿನಿ ಭಟ್ ಅವರೊಂದಿಗೆ ಸೇರಿ ಉಸ್ಮಾನಿಯಾ ವಿವಿಯ ವೈಷ್ಣವಿ ಮತ್ತು ಸಾಹಿತಿ ಅವರನ್ನು ಸುಲಭದಲ್ಲಿ ಮಣಿಸಿ ತಂಡಕ್ಕೆ 2-0 ಜಯ ನೀಡಿದರು.

ಕಳೆದ ವರ್ಷದ ರನ್ನರ್ ಅಪ್ ಕಲ್ಲಿಕೋಟೆ ವಿವಿ, ತಮಿಳುನಾಡಿನ ಅಣ್ಣಾ ವಿವಿಯಿಂದ ಯಾವುದೇ ಪ್ರತಿರೋಧ ಎದುರಿಸಲ್ಲಿಲ್ಲ. ಅದು ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳೆರಡನ್ನೂ ಗೆದ್ದು ಮುಂದಿನ ಹಂತಕ್ಕೆ ತೇರ್ಗಡೆಗೊಂಡಿತು. ಚೆನ್ನೈನ ಎಸ್‌ಆರ್‌ಎಂ ತಂಡ, ಆತಿಥೇಯ ಮಾಹೆ ವಿವಿಯನ್ನು 2-0 ಅಂತರದಿಂದ ಮಣಿಸಿತು. ಎಸ್‌ಆರ್‌ಎಂನ ನಿವಿತಾ ಅವರು ಮಾಹೆಯ ಸ್ಟುಟಿ ಅವರನ್ನು ಸೋಲಿಸಿದರೆ, ಡಬಲ್ಸ್‌ನಲ್ಲಿ ರಮ್ಯ ಮತ್ತು ನೀಲಾ ಅವರು ಮಾಹೆಯ ಮೊನಿಷ್ ಮತ್ತು ಸ್ಟುಟಿ ಅವರನ್ನು ಸುಲಭದಲ್ಲಿ ಹಿಮ್ಮೆಟ್ಟಿಸಿದರು.

ಕೊನೆಯ ಕ್ವಾರ್ಟರ್ ಫೈನಲ್‌ನಲ್ಲಿ ಆಂಧ್ರ ವಿವಿ, ಕೇರಳದ ಮಹಾತ್ಮಗಾಂಧಿ ವಿವಿಯನ್ನು ಪರಾಭವಗೊಳಿಸಿತು. ಆದರೆ ಸಿಂಗಲ್ ಮತ್ತು ಡಬಲ್ಸ್ ಪಂದ್ಯ ಗಳೆರಡೂ ಮೂರು ಗೇಮ್‌ಗಳಲ್ಲಿ ನಿರ್ಧಾರವಾಯಿತು. ಸಿಂಗಲ್ಸ್‌ನಲ್ಲಿ ಆಂಧ್ರದ ನಿಶಿತಾ ವರ್ಮ ಅವರು ಅಂಜಲಿ ಅವರನ್ನು ಸೋಲಿಸಿದರೆ, ಡಬಲ್ಸ್‌ನಲ್ಲಿ ಪ್ರೀತಿ ಮತ್ತು ಅಕಷಿತಾ ಅವರು ಮಹಾತ್ಮಗಾಂಧಿ ವಿವಿಯ ರಿಝಾ ಹಾಗೂ ಅಂಜಲಿ ಅವರನ್ನು ಹಿಮ್ಮೆಟ್ಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News