ಡಿ.7: ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ

Update: 2019-12-04 16:09 GMT

ಕಾಪು, ಡಿ.4: ಭಾರತ ಸೇವಾದಳ ಉಡುಪಿ ತಾಲೂಕು ಸಮಿತಿ ವತಿಯಿಂದ ತಾಲೂಕು ಮಟ್ಟದ ರಾಷ್ಟ್ರೀಯ ಭಾವವೈಕ್ಯತಾ ಮಕ್ಕಳ ಮೇಳವನ್ನು ಡಿ.7ರಂದು ಶಂಕರಪುರ ಸೈಂಟ್ ಜೋನ್ಸ್ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದೆ.

ಈ ಮೇಳದಲ್ಲಿ 57 ಶಾಲೆಗಳಿಂದ 700 ಭಾರತ ಸೇವಾದಳದ ಸಮವಸ್ತ್ರದ ವಿದ್ಯಾರ್ಥಿಗಳು ಮತ್ತು 4 ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡುವ 300 ವಿದ್ಯಾರ್ಥಿಗಳ ಸಹಿತ ಸುಮಾರು ಒಂದು ಸಾವಿರ ವಿದ್ಯಾರ್ಥಿ ಗಳು ಭಾಗವಹಿಸಲಿರುವರು ಎಂದು ಭಾರತ ಸೇವಾದಳ ಉಡುಪಿ ಜಿಲ್ಲಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಬೆಳಗ್ಗೆ 9:30ಕ್ಕೆ ಮೇಳವನ್ನು ಮಕ್ಕಳ ಮೇಳ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಲಾಲಾಜಿ ಆರ್.ಮೆಂಡನ್ ಉದ್ಘಾಟಿಸಲಿರುವರು. ಶಂಕರಪುರ ಸೈಂಟ್ ಜೋನ್ಸ್ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ.ಫರ್ಡಿನಾಂಡ್ ಗೋನ್ಸಾಲ್ವಿಸ್ ಅಧ್ಯಕ್ಷತೆ ವಹಿಸಲಿರುವರು. ಕಟಪಾಡಿ ಗ್ರಾಪಂ ಅಧ್ಯಕ್ಷೆ ಜ್ಯುಲಿಯಟ್ ವೀರಾ ಡಿಸೋಜ ರಾಷ್ಟ್ರಧ್ವಜಾರೋಹಣ ನೆರವೇರಿಸಲಿರುವರು.

ಬಳಿಕ ಶಂಕರಪರ ಪೇಟೆಯಲ್ಲಿ ನಡೆಯುವ ಪುರಮೆರವಣಿಗೆಗೆ ಉಡುಪಿ ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ರತ್ನಕುಮಾರ್ ಚಾಲನೆ ನೀಡಲಿರುವರು. ಅಪರಾಹ್ನ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ವಹಿಸಲಿರುವರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಸೇವಾದಳದ ತಾಲೂಕು ಅಧಿನಾಯಕ ಎಸ್.ಎಸ್. ಪ್ರಸಾದ್, ಅಧಿನಾಯಕಿ ರಾಜೇಶ್ವರಿ, ಜಿಲ್ಲಾ ಸಂಘಟಕ ಪಕ್ಕೀರ ಗೌಡ, ಮಕ್ಕಳ ಮೇಳದ ಸಂಚಾಲಕಿ ಮಾಲಿನಿ ಶೆಟ್ಟಿ ಇನ್ನಂಜೆ, ಉಪಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಸಹ ಕಾರ್ಯದರ್ಶಿ ಡೊಮೊನಿಯನ್ ನೊರೊನ್ಹಾ, ಸೈಂಟ್ ಜೋನ್ಸ್ ಶಾಲಾ ಮುಖ್ಯೋಪಾಧ್ಯಾಯ ಅಶ್ವಿನ್ ರೋಡ್ರಿಗಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News