ನಕಲಿ ಹೆಸರಿನಲ್ಲಿ ರೈಲ್ವೆ ಟಿಕೇಟ್ ಖರೀದಿ: ಪ್ರಕರಣ ದಾಖಲು

Update: 2019-12-04 16:25 GMT

ಉಡುಪಿ, ಡಿ. 4: ಬೇರೆ ಬೇರೆ ಹೆಸರಿನ ಐಡಿಗಳನ್ನು ಸೃಷ್ಠಿಸಿ, ಕಮಿಷನ್ ಆಧಾರದಲ್ಲಿ ರೈಲ್ವೆ ಇ-ಟಿಕೇಟ್‌ಗಳನ್ನು ಮಾರಾಟ ಮಾಡುತಿದ್ದ, ಸುರತ್ಕಲ್ ಬಸ್‌ನಿಲ್ದಾಣದ ಬಳಿಯ ಸ್ಯಾನ್ಸಿಟಿ ಟೂರ್ ಎಂಡ್ ಟ್ರಾವೆಲ್ಸ್‌ನ ರಾಮಕೃಷ್ಣ ಪೂಜಾರಿ ಎಂಬುವವರ ವಿರುದ್ದ ಕಾರವಾರದ ರೈಲ್ವೆ ಪೊಲೀಸ್ ಪಡೆ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ಪರಿಶೀಲನೆಯ ಸಮಯದಲ್ಲಿ ಈತನ ಬಳಿ 16,178 ರೂ. ಮೌಲ್ಯದ 14 ಮುಂಗಡ ಪ್ರಯಾಣದ ರೈಲು ಟಿಕೆಟ್‌ಗಳು ಮತ್ತು 19,904 ರೂ. ವೌಲ್ಯದ ಈಗಾಗಲೇ ಬಳಕೆಯಾದ 21 ರೈಲು ಟಿಕೆಟ್‌ಗಳು ಪತ್ತೆಯಾಗಿವೆ. ದಾಳಿಯ ವೇಳೆ ಟಿಕೇಟ್‌ಗಳೊಂದಿಗೆ 4750ರೂ. ನಗದು, ರಶೀದಿ ಪುಸ್ತಕ, ಮೊಬೈಲ್, ಪ್ರಿಂಟರ್, ಸಿಪಿಯು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವರ ವಿರುದ್ಧ ರೈಲ್ವೆ ಕಾಯ್ದೆಯಂತೆ ಕೇಸು ದಾಖಲಿಸಲಾಗಿದ್ದು, ಉಡುಪಿ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಆರೋಪಿ ಯನ್ನು ಹಾಜರು ಪಡಿಸಲಾಗಿದೆ. ನ್ಯಾಯಾಧೀಶರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಆರೋಪಿಗೆ 8,000 ರೂ.ಗಳ ದಂಡ ವಿಧಿಸಿ ಆದೇಶ ನೀಡಿದರು. ದಂಡ ತೆರಲು ವಿಫಲವಾದರೆ ಎರಡು ದಿನಗಳ ಸಾದಾ ಶಿಕ್ಷೆಯನ್ನು ವಿಧಿಸಲಾಗಿದೆ.

ದಾಳಿಯ ವೇಳೆ ವಶಪಡಿಸಿಕೊಂಡಿರುವ ವಸ್ತುಗಳನ್ನು ಕೋರ್ಟ್‌ಗೆ ಒಪ್ಪಿಸಲಾಗಿದೆ. ದಂಡದ ಮೊತ್ತವನ್ನು ಪಾವತಿಸಿರುವ ಆರೋಪಿಯನ್ನು ಬಿಡುಗಡೆಗೊಳಿಸಲಾಗಿದೆ. ಕಾರ್ಯಚರಣೆಯಲ್ಲಿ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಸಂತೋಷ್ ಗಾಂವ್ಕರ್, ಸಿಬ್ಬಂದಿ ಗಳಾದ ಮಕ್ವಾನ, ಶಿಶುಪಾಲ, ಎಸ್.ಎ.ಕುಟೆ, ಮೊಹಮ್ಮದ್, ಕರುಣಾಕರ್ ಹಾಗೂ ಮಹಿಳಾ ಕಾನ್ಸ್‌ಟೇಬಲ್ ರೂಪಾ ನಾಯಕ್ ಭಾಗವಹಿಸಿದ್ದರು ಎಂದು ಆರ್.ಪಿ.ಎಪ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News