ಕೇಂದ್ರದಿಂದ ಅಂಗನಾಡಿಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ: ಯಮುನಾ ಗಾಂವ್ಕರ್

Update: 2019-12-04 16:26 GMT

ಉಡುಪಿ, ಡಿ.4: ಕೇಂದ್ರ ಸರಕಾರ ಅಂಗನವಾಡಿ ಕೇಂದ್ರದ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದ್ದ ಯೋಜನೆಗಳಿಗೆ ಅನುದಾನ ಕಡಿತ ಮಾಡಿದ್ದು, ಕ್ರಮೇಣ ಅಂಗನವಾಡಿಗಳನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ಈ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಹೋರಾಟ ಮಾಡದಿದ್ದರೆ ಮುಂದೆ ಅಂಗನವಾಡಿ ನೌಕರರಿಗೆ ಉಳಿಗಾಲ ಇಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ಆರೋಪಿಸಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿ ಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಡಿ.10 ರಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಅಂಗನವಾಡಿ ನೌಕರರ ಅನಿರ್ದಿಷ್ಟಾ ವಧಿ ಮುಷ್ಕರದ ಪ್ರಯುಕ್ತ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ನಡೆದ ಪ್ರಚಾರ ಜಾಥದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ 28 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ದುಡಿಯುತ್ತಿದ್ದಾರೆ. ಆಹಾರ, ಆರೋಗ್ಯ, ಶಿಕ್ಷಣ ಒಂದೆ ಕಡೆ ಯಲ್ಲಿ ಸಿಗುವ ಏಕೈಕ ಕೇಂದ್ರ ಅಂದರೆ ಅದು ಅಂಗನವಾಡಿ ಕೇಂದ್ರವಾಗಿದೆ. ಅಂಗವಾಡಿ ಕೇಂದ್ರಕ್ಕೆ ಮೊದಲು ಕೇಂದ್ರದ ಪಾಲು ಶೇ.90ರಷ್ಟಿದ್ದರೆ ರಾಜ್ಯದ ಪಾಲು 10ರಷ್ಟಿತ್ತು. ಆದರೆ ಮೋದಿ ಸರಕಾರ ಬಂದ ನಂತರ ಅದು 60:40ಕ್ಕೆ ಬಂದಿದೆ. ಈ ಮೂಲಕ ಶೇ.30ರಷ್ಟು ಹೆಚ್ಚಿನ ಹೊರೆ ರಾಜ್ಯ ಸರಕಾರದ ಮೇಲೆ ಹೊರಿಸಲಾಗಿದೆ ಎಂದರು.

ಅಂಗನವಾಡಿಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದ ಯೋಜನೆಗಳಿಗೆ ಅನುದಾನ ಕಡಿತ ಮಾಡಿದ ಪರಿಣಾಮ ಕಿಶೋರಿ ಗಳಿಗೆ ನೀಡುವ ಆಹಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗೆ ಅಂಗನವಾಡಿಗಳನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ಈ ಮೂಲಕ ಅಂಗನವಾಡಿ ನೌಕರರನ್ನು ಬೀದಿ ತಳ್ಳುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಅವರು ದೂರಿದರು.

ಮನೆ ಕೆಲಸದವರಿಗೆ ನಿಗದಿ ಪಡಿಸಿದಷ್ಟು ಕನಿಷ್ಠ ಕೂಲಿಯನ್ನು ಅಂಗನವಾಡಿ ನೌಕರರಿಗೆ ಮಾಡಿಲ್ಲ. ನಮ್ಮ ಕೂಲಿಯನ್ನು ಸರಕಾರ ಬಾಕಿ ಉಳಿಸಿಕೊಂಡಿದೆ. ಕನಿಷ್ಠ ಕೂಲಿ 18ಸಾವಿರ ರೂ. ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಅದೇ ರೀತಿ ಅಂಗನವಾಡಿ ಕೇಂದ್ರಗಳಿಗೆ ಕಡಿತ ಮಾಡಿರುವ ಅನುದಾನವನ್ನು ವಾಪಾಸ್ಸು ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಅಂಗನವಾಡಿ ನೌಕರರ ಬೇಡಿಕೆ ಮುಂದಿಟ್ಟುಕೊಂಡು ತುಮಾಕೂರಿನಿಂದ ಬೆಂಗಳೂರಿನವರೆಗೆ ಪಾದ ಯಾತ್ರೆಯ ಮೂಲಕ ತೀವ್ರ ಹೋರಾಟ ನಡೆಸಲಾಗುವುದು. ಕೇಂದ್ರ ಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಪ್ರಶ್ನಿಸುವವರ ಹಾಗೂ ಹೋರಾಟ ಗಾರರನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ದೇಶದ ಆರ್ಥಿಕ ಸ್ಥಿತಿ ತೀರಾ ಕೆಳಮಟ್ಟಕ್ಕೆ ಕುಸಿದಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ, ಕೋಶಾಧಿಕಾರಿ ಯಶೋಧ, ಮುಖಂಡರಾದ ಕವಿರಾಜ್, ವಿದ್ಯಾರಾಜ್, ಬಲ್ಕಿಸ್ ಕುಂದಾಪುರ, ಪ್ರೇಮಾ, ವಾಣಿ, ಪ್ರಮೀಳಾ, ಜಯಲಕ್ಷ್ಮೀ, ಸರೋಜ, ಸರೋಜಿನಿ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಟ ನೂರಾರು ಅಂಗನವಾಡಿ ನೌಕರರ ಜಾಥವು ಪ್ರಮುಖ ಮಾರ್ಗದಲ್ಲಿ ಸಂಚರಿಸಿ ಅಜ್ಜರಕಾಡಿನಲ್ಲಿ ಸಮಾಪ್ತಿಗೊಂಡಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News