ಮಂಗಳೂರು: ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಸರ್ವ ಕಾಲೇಜು ಒಕ್ಕೂಟ ಪ್ರತಿಭಟನೆ

Update: 2019-12-04 16:52 GMT

ಮಂಗಳೂರು, ಡಿ.4: ಹೈದರಾಬಾದ್‌ನ ಪಶುವೈದ್ಯೆಯ ಅತ್ಯಾಚಾರ-ಹತ್ಯೆ ಹಾಗೂ ಐಐಟಿ ಮದ್ರಾಸ್ ವಿದ್ಯಾರ್ಥಿನಿ ಮೇಲಿನ ಹತ್ಯೆ ಖಂಡಿಸಿ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದಿಂದ ಜ್ಯೋತಿ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅಬ್ದುಲ್ ಬಾಸಿತ್, ದೇಶಾದ್ಯಂತ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಮಿತಿ ಮೀರುತ್ತಿದೆ. ಸರಕಾರವು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡದ ಕಾರಣ ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ ಎಂದರು.

ಸಮಾಜವನ್ನು ಬೆಚ್ಚಿ ಬೀಳಿಸುವಂತಹ ಹೈದರಾಬಾದಿನ ಪಶುವೈದ್ಯೆ  ಮೇಲಿನ ಅತ್ಯಾಚಾರ ಮತ್ತು ದಹನ ಪ್ರಕರಣವು ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಆರೋಪಿಗಳನ್ನು ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಮುರ್ಷಿದಾ ಮಾತನಾಡಿ, ಐಐಟಿ ಮದ್ರಾಸ್ ಪ್ರಕರಣವು ಇಸ್ಲಾಮೊಫೋಬಿಯಾ ಸಾಂಸ್ಥಿಕ ಹತ್ಯೆ ಉದಾಹರಣೆಯಾಗಿದೆ. ಇಂತಹ ಮನೋಸ್ಥಿತಿಯು ಶಿಕ್ಷಣ ರಂಗಕ್ಕೆ ಅಪಾಯಕಾರಿ ಯಾಗಿದೆ. ವಿದ್ಯಾರ್ಥಿನಿ ಫಾತಿಮಾ ಲತೀಫಾಳಿಗೆ ನ್ಯಾಯ ಸಿಗಬೇಕು. ಸಾಂಸ್ಥಿಕ ಹತ್ಯೆ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು ಎಂದು ಹೇಳಿದರು.

ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಅಧ್ಯಕ್ಷ ಸವದ್ ಕಲ್ಲರ್ಪೆ ಮಾತನಾಡಿ, ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಸರಕಾರ ಆರೋಪಿಗಳ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಆದಷ್ಟು ಬೇಗ ಸರಕಾರವು ಮಹಿಳೆಯ ರಕ್ಷಣೆಯ ಬಗ್ಗೆ ಸ್ಪಷ್ಟ ನಿಯಮಗಳನ್ನು ಜಾರಿಗೆ ತರಬೇಕು. ಮಹಿಳಾ ದೌರ್ಜನ್ಯ ಕಾಯ್ದೆಯನ್ನು ಬಲಗೊಳಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮೊಯಿನುದ್ದೀನ್ ಫರಾಝ್, ಸೈಫಾ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಫಲ್ ಕುಪ್ಪೆಟ್ಟಿ ಸ್ವಾಗತಿಸಿ, ವಂದಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ವಿದ್ಯಾರ್ಥಿ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News