ಸಂಸ್ಕಾರಯುತ ಶಿಕ್ಷಣದಿಂದ ಸತ್ಪ್ರಜೆಗಳಾಗಲು ಸಾಧ್ಯ: ಅಬ್ದುರ್ರಹ್ಮಾನ್

Update: 2019-12-05 09:04 GMT

ಉಪ್ಪಿನಂಗಡಿ, ಡಿ.5: ಶಾಲೆಗಳೆಂದರೆ ಬರೇ ವಿದ್ಯಾಲಯವಲ್ಲ. ಅದು ದೇವ ಮಂದಿರವಿದ್ದಂತೆ. ವಿದ್ಯಾರ್ಥಿಗಳನ್ನು ಸತ್ಪ್ರಜೆಗಳಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಇದಕ್ಕಿದೆ. ಆದ್ದರಿಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸ ಶಾಲೆಗಳಲ್ಲಾಗಬೇಕು ಎಂದು ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಅಭಿಪ್ರಾಯಿಸಿದರು.

ಉಪ್ಪಿನಂಗಡಿಯ ದೀನರ ಕನ್ಯಾಮಾತಾ ದೇವಾಲಯದ ಅಧೀನದ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಂಗವಾಗಿ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗುರುವಾರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.  

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಓಸ್ವಾಲ್ಡ್ ಪಿಂಟೋ ಮಾತನಾಡಿ, ಶಾಲಾ ವಾರ್ಷಿಕೋತ್ಸವವೆಂದರೆ ಊರಿನ ಜಾತ್ರೋತ್ಸವವಿದ್ದಂತೆ. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಇದೊಂದು ಅವಕಾಶವಾಗಿದ್ದು, ಪ್ರತಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಸೋತಾಗ ಎದೆಗುಂದದೆ ಗೆಲ್ಲಲು ಪ್ರಯತ್ನ ಪಡಬೇಕು. ಇಂತಹ ಸ್ಪರ್ಧೆಗಳು ಬದುಕಿಗೂ ಒಂದು ಪಾಠವಾಗುತ್ತದೆ ಎಂದರು.

ಶಾಲಾ ಸಂಚಾಲಕ ರೆ.ಫಾ. ಅಬೆಲ್ ಲೋಬೋ ಮಾತನಾಡಿ, ಜೀವನದಲ್ಲಿ ಉತ್ತಮ ನಾಯಕನಾಗುವ ಪ್ರಯತ್ನ ಪ್ರತಿಯೋರ್ವ ವಿದ್ಯಾರ್ಥಿಯಲ್ಲಿರಬೇಕು. ಪ್ರತಿಯೋರ್ವ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ಪ್ರತಿಭೆಯಿದ್ದು, ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಸತತ ಪ್ರಯತ್ನದ ಮೂಲಕ ಯಾವುದಾದರೊಂದು ಕ್ಷೇತ್ರದಲ್ಲಿ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕು. ಸ್ಪರ್ಧೆಯಲ್ಲಿ ಬಹುಮಾನಕ್ಕಿಂತ ಭಾಗವಹಿಸುವಿಕೆ ಮುಖ್ಯ ಎಂದರು.

ವೇದಿಕೆಯಲ್ಲಿ ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷೆ ವಾಣಿಶ್ರೀ, ಶಾಲಾ ಮುಖ್ಯೋಪಾಧ್ಯಾಯಿನಿ ಮೀರಾ ರೊಡ್ರಿಗಸ್, ನರ್ಸರಿ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಪ್ಲೋರಾ ಉಪಸ್ಥಿತರಿದ್ದರು.

ಶಿಕ್ಷಕಿ ಶ್ವೇತಾ ಸ್ವಾಗತಿಸಿದರು. ಸಿಸ್ಟರ್ ಗ್ರೇಯಿ ಡಿಸೋಜ ವಂದಿಸಿದರು. ಸಿಸ್ಟರ್ ಶಾಂತಿ ಲವೀನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News