ಉಳ್ಳಾಲ ದರ್ಗಾ ಬಗ್ಗೆ ವಕ್ಫ್ ಇಲಾಖೆಗೆ ಸುಳ್ಳು ಮಾಹಿತಿ ನೀಡಲಾಗಿತ್ತು : ಅಬ್ದುಲ್ ರಶೀದ್

Update: 2019-12-05 13:47 GMT

ಮಂಗಳೂರು : ಉಳ್ಳಾಲ ದರ್ಗಾ ಆಡಳಿತ ಸಮಿತಿ ಕಳೆದ ಮೂರುವರೆ ವರ್ಷದಿಂದ ಉತ್ತಮ ಆಡಳಿತ ನೀಡಿದರೂ ಕೂಡಾ ವಿರೋಧಿ ಬಣ ವಕ್ಫ್ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿ ಯಾಗಿ ಇಬ್ರಾಹಿಂ ಗೂನಡ್ಕ ಅವರನ್ನು ನೇಮಕ ಮಾಡಲಾಗಿತ್ತು ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ಅವರು ಗುರುವಾರ ದರ್ಗಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಉಳ್ಳಾಲ ದರ್ಗಾದಲ್ಲಿ 18 ವಿದ್ಯಾಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಅರೆಬಿಕ್ ಟ್ರಸ್ಟ್ ನಡಿಯಲ್ಲಿ 300 ವಿದ್ಯಾರ್ಥಿಗಳು ದರ್ಗಾ ಕ್ಯಾಂಪಸ್ ನಲ್ಲಿ ಉಚಿತವಾಗಿ ಅರೆಬಿಕ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ವಸತಿ, ದೈನಂದಿನ ಆಹಾರ ಉಚಿತವಾಗಿ ನೀಡಲಾಗುತ್ತಿದೆ. ದರ್ಗಾದಲ್ಲಿ ಇಬ್ರಾಹಿಂ ಹಾಜಿ ಅಧ್ಯಕ್ಷರಾಗಿದ್ದ ವೇಳೆ ದರ್ಗಾ ಸಾರ್ವಜನಿಕ ಸಂಸ್ಥೆ ಎಂಬ ಕಾರಣಕ್ಕೆ ಮಾಸಿಕ 2,500 ರೂ. ಸೆಸ್ ವಿಧಿಸಿತ್ತು. ಕ್ರಮೇಣ 5 ಸಾವಿರಕ್ಕೇರಿತ್ತು. ಈಗ ಅದರ ಮೌಲ್ಯ 10 ಸಾವಿರಕ್ಕೆ ತಲುಪಿದೆ. ಪ್ರಸ್ತುತ ಹತ್ತು ಸಾವಿರ ರೂ. ತಿಂಗಳಿಗೆ ದರ್ಗಾ ಸೆಸ್ ಪಾವತಿಸುತ್ತಿದೆ. ನಾವು ಅಧಿಕಾರ ವಹಿಸಿಕೊಂಡ ಬಳಿಕ ವಿರೋಧಿ ಬಣ 1.36 ಕೋಟಿ ರೂ. ಸೆಸ್ ಬಾಕಿ ಇಟ್ಟಿದೆ ಎಂದು ವಕ್ಫ್ ಇಲಾಖೆಗೆ ತಪ್ಪು ಮಾಹಿತಿ ನೀಡಿತ್ತು.  ಪ್ರಸಕ್ತ  ಸೆಸ್‍ಗೆ ಬಾಕಿ ಇರುವ ಹಣದ ಮೊತ್ತ 1.70 ಕೋಟಿಗೆ ಏರಿಸಿದ್ದು ಮಾತ್ರವಲ್ಲದೆ ಗೊಂದಲ ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ರಾಜ್ಯ ವಕ್ಫ್ ಆಡಳಿತಾಧಿಕಾರಿ ನೇಮಕ ಮಾಡಿತು. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಮಧ್ಯೆ  ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿಯಲ್ಲ. ವಕ್ಫ್ ಇಲಾಖೆಗೆ ತಿಳುವಳಿಕೆಯ ಕೊರತೆಯಿಂದ ನೇಮಕ ಮಾಡಿರಲೂಬಹುದು. ಆದರೆ  ಈ ರೀತಿ ಒಂದು ಸಂಸ್ಥೆಯ ಮೇಲೆ ಸವಾರಿ ಮಾಡುತ್ತಿರುವುದು ಖಂಡನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಉರೂಸ್ ಆದ ಕೂಡಲೇ ನೂತನ ಸಮಿತಿ ಚುನಾವಣೆ ಮೂಲಕ ಅಸ್ತಿತ್ವಕ್ಕೆ ಬರುತ್ತದೆ. ಕಳೆದ ಬಾರಿ ಉರೂಸ್ ಮುಗಿದು  2015ರಲ್ಲಿ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬರಬೇಕಾಗಿತ್ತಾದ್ದರೂ ಕೆಲವು ಗೊಂದಲದ ವಾತಾವರಣ ನಿರ್ಮಾಣವಾದ ಕಾರಣ 2016ರಲ್ಲಿ  ಆಡಳಿತ ಅಸ್ತಿತ್ವಕ್ಕೆ ಬಂದಿದೆ.   ಕಳೆದ ಮೂರುವರೆ ವರ್ಷಗಳಿಂದ ಆಡಳಿತದ ವಿರುದ್ಧ  ಕೇರಳ ಮೂಲದ ಒಂದು ಗುಂಪು ಸವಾರಿ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ವ್ಯವಸ್ಥೆ ಮಾಡಿದ್ದಾರೆ.  ಇದಕ್ಕೆ ಯಾರೂ ಸಮ್ಮತ ವ್ಯಕ್ತಪಡಿಸದಿದ್ದರೂ ಇಬ್ರಾಹಿಂ ಕೂರ್ನಡ್ಕ ಅವರಿಂದ  ಗೊಂದಲ  ಉಂಟಾಗಿದೆ. ಆದರೆ ಜಿಲ್ಲಾ ಖಾಝಿ ತ್ವಾಖಾ ಉಸ್ತಾದರು ಮುಖ್ಯಮಂತ್ರಿಗಳ ಮೂಲಕ ಆಡಳಿತಾಧಿಕಾರಿ ರದ್ದುಪಡಿಸುವಲ್ಲಿ ಯಶಸ್ವಿ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಕೋಶಾಧಿಕಾರಿ ಯು.ಕೆ. ಇಲ್ಯಾಸ್,  ಸದಸ್ಯರಾದ ಫಾರೂಕ್ ಉಳ್ಳಾಲ್ ಹಾಗೂ ಎವರೆಸ್ಟ್ ಮುಸ್ತಫಾ ಉಪಸ್ಥಿತರಿದ್ದರು.

ದರ್ಗಾ ದಾಖಲಾತಿ ಕೇಳಿದ ಆಡಳಿತಾಧಿಕಾರಿ

ಉಳ್ಳಾಲ ದರ್ಗಾ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಇಬ್ರಾಹಿಂ ಗೂನಡ್ಕ ಅವರು ಜಿಲ್ಲಾಡಳಿತದ ನಿಯೋಗದೊಂದಿಗೆ ಉಳ್ಳಾಲ ದರ್ಗಾಕ್ಕೆ ಗುರುವಾರ ಸಂಜೆ ಭೇಟಿ ನೀಡಿ, ದಾಖಲಾತಿ ಒಪ್ಪಿಸುವಂತೆ ಕೇಳಿ ಕೊಂಡಿದ್ದಾರೆ. ಈ ಸಂದರ್ಭ ಅಧ್ಯಕ್ಷರು ಇಲ್ಲದಿದ್ದ ಕಾರಣ ದಾಖಲಾತಿ ಸಿಗಲಿಲ್ಲ ಎಂದು ಇಬ್ರಾಹಿಂ ಕೂರ್ನಡ್ಕ ತಿಳಿಸಿದ್ದಾರೆ.

ನಿಯೋಗದಲ್ಲಿ ಸಹಾಯಕ ಅಧಿಕಾರಿ ರವಿಚಂದ್ರ ನಾಯಕ್, ಡಿಸಿಪಿ ಅರುಣಾಂಶಗಿರಿ, ಡಿಸಿಪಿ ಕ್ರೈ ಲಕ್ಷ್ಮೀ ಗಣೇಶ್, ಎಸಿಪಿ ಕೋದಂಡರಾಮ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಮೊದಲಾದವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News