ದ.ವಲಯ ಅಂತರ ವಿವಿ ಮಹಿಳಾ ಬ್ಯಾಡ್ಮಿಂಟನ್ : ಪ್ರಶಸ್ತಿ ಉಳಿಸಿಕೊಂಡ ಜೈನ್ ವಿವಿ, ಕಲ್ಲಿಕೋಟೆ ರನ್ನರ್‌ಅಪ್

Update: 2019-12-05 14:40 GMT

ಮಣಿಪಾಲ, ಡಿ.5: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಆಶ್ರಯದಲ್ಲಿ ವಿವಿಯ ಒಳಾಂಗಣ ಕ್ರೀಡಾ ಸಂಕೀರ್ಣ ‘ಮರೆನಾ’ದಲ್ಲಿ ನಡೆದ ದಕ್ಷಿಣ ವಲಯ ಅಂತರ ವಿವಿ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯ ಚಾಂಪಿಯನ್ ಪ್ರಶಸ್ತಿಯನ್ನು ಬೆಂಗಳೂರಿನ ಜೈನ್ ವಿವಿ ತಂಡ ತನ್ನಲ್ಲೇ ಉಳಿಸಿಕೊಂಡಿತು. ಕೇರಳದ ಕಲ್ಲಿಕೋಟೆ ವಿವಿ ಮತ್ತೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು.

ಗುರುವಾರ ಅಪರಾಹ್ನ ನಡೆದ ಏಕಪಕ್ಷೀಯ ಫೈನಲ್ ಪಂದ್ಯದಲ್ಲಿ ಜೈನ್ ವಿವಿಯ ಮಹಿಳಾ ತಂಡ, ಕಲ್ಲಿಕೋಟೆ ವಿವಿಯನ್ನು ಎರಡು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಸತತ ಐದನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಮಿಳುನಾಡಿನ ಎಸ್‌ಆರ್‌ಎಂ ವಿವಿಯನ್ನು 2-1 ಅಂತರದಿಂದ ಮಣಿಸಿದ ಆಂಧ್ರ ಪ್ರದೇಶದ ಆಂಧ್ರ ವಿವಿ ಮೂರನೇ ಸ್ಥಾನ ಪಡೆಯಿತು.

ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಶಿಖಾ ರಾಜೇಶ್ ಗೌತಮ್ ರನ್ನು ಒಳಗೊಂಡ ಜೈನ್ ವಿವಿ, ಟೂರ್ನಿಯುದ್ದಕ್ಕೂ ಸ್ಪಷ್ಟ ಮೇಲುಗೈ ಪಡೆದಿತ್ತು. ಯಾವುದೇ ಎದುರಾಳಿ ತಂಡಕ್ಕೂ ಜೈನ್ ವಿವಿಗೆ ಪ್ರತಿರೋಧ ಒಡ್ಡಲು ಸಾಧ್ಯ ವಾಗಲಿಲ್ಲ.
ಫೈನಲ್‌ನಲ್ಲಿ ಶಿಖಾ ರಾಜೇಶ್ ಗೌತಮ್ ಹಾಗೂ ಕಲ್ಲಿಕೋಟೆ ವಿವಿಯ ಅಶ್ವಥಿ ನಡುವಿನ ಮೊದಲ ಸಿಂಗಲ್ಸ್ ಪಂದ್ಯ ಆರಂಭಿಕ ಹಂತದಲ್ಲಿ ನಿಕಟ ಹೋರಾಟದ ಸೂಚನೆಯನ್ನು ನೀಡಿದರೂ, ಶಿಖಾ ಅವರ ಅನುಭವದ ಎದುರು ಎದುರಾಳಿ ಶರಣಾಗಲೇಬೇಕಾಯಿತು.

ಒಂದು ಹಂತದಲ್ಲಿ ಅಶ್ವಥಿ ಅವರು 15-9ರ ಮುನ್ನಡೆಯಲಿದ್ದರೂ, ಶಿಖಾ ಅವರು ಅದ್ಭುತ ರ್ಯಾಲಿಗಳ ಮೂಲಕ ಗೇಮ್‌ನ್ನು 21-19ರಿಂದ ಗೆದ್ದುಕೊಂಡು ಅಂತಿಮವಾಗಿ ಪಂದ್ಯವನ್ನು 21-19, 21-09ರಿಂದ ಜಯಿಸಿದರು.

ಮುಂದಿನ ಡಬಲ್ಸ್‌ನಲ್ಲಿ ಶಿಖಾ ರಾಜೇಶ್ ಹಾಗೂ ಅಶ್ವಿನಿ ಭಟ್ ಜೋಡಿ, ಕಲ್ಲಿಕೋಟೆಯ ಅಶ್ವಥಿ ಮತ್ತು ಶ್ರುತಿ ಕೆ.ಪಿ. ಜೋಡಿಯನ್ನು 21-16, 21-14ರಿಂದ ಹಿಮ್ಮೆಟ್ಟಿಸಿ ತಂಡಕ್ಕೆ 2-0 ಅಂತರದ ಜಯ ದೊರಕಿಸಿಕೊಟ್ಟರು. ಮೂರನೇ ಸ್ಥಾನಕ್ಕಾಗಿ ಸೆಮಿ ಫೈನಲ್‌ನಲ್ಲಿ ಸೋತ ಆಂಧ್ರ ವಿವಿ ಹಾಗೂ ಎಸ್‌ಆರ್‌ಎಂ ವಿವಿ ನಡುವಿನ ಪಂದ್ಯ ನಿಕಟವಾಗಿದ್ದರೂ, ಪ್ರೇಕ್ಷಕರಲ್ಲಿ ಯಾವುದೇ ಕುತೂಹಲ ಕೆರಳಿಸಲು ವಿಫಲವಾಯಿತು. ಎಸ್‌ಆರ್‌ಎಂ ಒಂದು ಮೊದಲ ಡಬಲ್ಸ್‌ನ್ನು ಗೆದ್ದು ಸಮಬಲ ಸಾಧಿಸಿದರೂ, ಎರಡನೇ ಸಿಂಗಲ್ಸ್‌ನಲ್ಲಿ ಏಕಪಕ್ಷೀಯವಾದ ಸೋಲನುಭವಿಸಿತು.

ಇಂದು ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಕಲ್ಲಿಕೋಟೆ ವಿವಿ, ತಮಿಳುನಾಡಿನ ಎಸ್‌ಆರ್‌ಎಂ ವಿವಿಯನ್ನು 2-1ರಿಂದ ಹಾಗೂ ಜೈನ್ ವಿವಿ, ಆಂಧ್ರ ವಿವಿಯನ್ನು 2-0ಯಿಂದ ಪರಾಭವಗೊಳಿಸಿ ಸತತ ಎರಡನೇ ಬಾರಿಗೆ ಫೈನಲ್‌ನ ಮುಖಾಮುಖಿಗೆ ಅರ್ಹತೆ ಪಡೆದುಕೊಂಡಿದ್ದವು.

ಸಮಾರೋಪ ಸಮಾರಂಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ, ಎಂಐಟಿಯ ನಿರ್ದೇಶಕ ಡಾ.ಶ್ರೀಕಾಂತ ರಾವ್ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಿದರು. ವಿವಿಯ ಕ್ರೀಡಾ ಕೌನ್ಸಿಲ್‌ನ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಜೊತೆ ಕಾರ್ಯದರ್ಶಿ ಡಾ.ಶೋಭಾ ಎಂ.ಇ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News