ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸಿ ಪೋಸ್ಟ್‌ಕಾರ್ಡ್ ಚಳವಳಿ

Update: 2019-12-05 14:44 GMT

ಉಡುಪಿ, ಡಿ.5: ಅತ್ಯಾಚಾರಿಗಳಿಗೆ ತ್ವರಿತವಾಗಿ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಡಾ.ಪ್ರಿಯಾಂಕ ರೆಡ್ಡಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಇಂದು ಉಡುಪಿ ಪ್ರಧಾನ ಅಂಚೆ ಕಚೇರಿಯ ಎದುರು ಪೋಸ್ಟ್ ಕಾರ್ಡ್ ಚಳವಳಿ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷೆ ರೋಶನಿ ಒಲಿವೆರಾ, ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಮಹಿಳೆಯರು ಇನ್ನೂ ಸುರಕ್ಷಿತವಾಗಿಲ್ಲ. ಮಹಿಳೆಯರು ಇಂದಿಗೂ ಭಯ, ಆತಂಕದಿಂದಲೇ ಬದುಕುವ ಸ್ಥಿತಿ ಇದೆ. ಹೀಗಾಗಿ ಸರಕಾರ ಮಹಿಳೆಯರ ಸುರಕ್ಷತೆ ಹಾಗೂ ಅತ್ಯಾಚಾರ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.

 ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ ಮಾತನಾಡಿ, ಅತ್ಯಾಚಾರ ಪ್ರಕರಣದ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಯಾವುದೇ ಕಾರಣಕ್ಕೂ ತಪ್ಪಿಸಿ ಕೊಳ್ಳಬಾರದು. ಆ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದರೆ ಮಾತ್ರ ಅತ್ಯಾಚಾರದಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗದ ಪರಿಣಾಮ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದರು.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಕಾನೂನಿನಲ್ಲಿ ತಿದ್ದುಪಡಿ ಮಾಡಿ ತ್ವರಿತ ವಾಗಿ ಗಲ್ಲುಶಿಕ್ಷೆ ನೀಡುವಂತಾಗಬೇಕು. ತ್ವರಿತವಾಗಿ ಕಠಿಣ ಕಾನೂನು ಕ್ರಮ ಗಳು ಜಾರಿಗೊಳಿಸುವ ಮೂಲಕ ಮಕ್ಕಳು, ಮಹಿಳೆಯರು ಸುರಕ್ಷಿತವಾಗಿ ಬದುಕುವ ವಾತಾವರಣ ಸೃಷ್ಟಿಸಬೇಕು ಎಂದು ಅವರು ತಿಳಿಸಿದರು.

ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಬರೆದ ನೂರಾರು ಅಂಚೆ ಪತ್ರಗಳನ್ನು ರಾಷ್ಟ್ರಪತಿಗೆ ಪೋಸ್ಟ್ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸಹಸಂಚಾಲಕಿ ಮೇರಿ ಡಿಸೋಜ, ತಾಪಂ ಸದಸ್ಯ ರಾದ ಸುಲೋಚನಾ, ದಿನೇಶ್ ಕೋಟ್ಯಾನ್, ಮುಖಂಡರಾದ ಮಹಾಬಲ ಕುಂದರ್, ಸೂರಿ ಸಾಲ್ಯಾನ್, ಸುಲೋಚನಾ ದಾಮೋದರ್, ಸುಗಂಧಿ ಶೇಖರ್, ಸೋಮನಾಥ್ ಬಿ.ಕೆ., ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಐರಿನ್ ಮೆನೇಜಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News