ಸುಡಾನ್ ಎಲ್‌ಪಿಜಿ ಟ್ಯಾಂಕರ್ ಸ್ಫೋಟ: ಮೃತರು,ಗಾಯಾಳುಗಳಲ್ಲಿ ಬಿಹಾರ, ತ.ನಾಡಿನವರೇ ಅಧಿಕ

Update: 2019-12-05 16:16 GMT

ಖಾರ್ತೊಮ್, ಡಿ.5: ಸುಡಾನ್‌ನ ಸೆರಾಮಿಕ್ಸ್ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಎಲ್‌ಪಿಜಿ ಟ್ಯಾಂಕರ್ ಸ್ಫೋಟ ಘಟನೆಯಲ್ಲಿ ಮೃತರಾದವರು ಹಾಗೂ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು ಹಾಗೂ ನಾಪತ್ತೆಯಾದವರಲ್ಲಿ ಬಹುತೇಕ ಮಂದಿ ತಮಿಳುನಾಡು ಹಾಗೂ ಬಿಹಾರ ರಾಜ್ಯಗಳಿಗೆ ಸೇರಿದವರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಮಧ್ಯೆ ದುರಂತದಲ್ಲಿ ಮೃತಪಟ್ಟ 18 ಮಂದಿ ಭಾರತೀಯರ ಕುರಿತ ವಿವರಗಳನ್ನು ದೃಢಪಡಿಸಿಕೊಳ್ಳಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಸುಡಾನ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿಯು, ರಾಜಧಾನಿ ಖಾರ್ತೊಮ್‌ಗೆ ಸಮೀಪದ ಬಾಹ್ರಿ ಪ್ರದೇಶದಲ್ಲಿರುವ ಸೀಲಾ ಸೆರಾಮಿಕ್ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದಲ್ಲಿ ಬದುಕುಳಿದಿರುವ ಹಾಗೂ ಆಸ್ಪತ್ರೆಗೆ ದಾಖಲಾಗಿರುವ ಮತ್ತು ನಾಪತ್ತೆಯಾಗಿರುವ ಭಾರತೀಯರ ವಿಸ್ತೃತ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬುಧವಾ ಸಂಭವಿಸಿದ ಎಲ್‌ಪಿಜಿ ಟ್ಯಾಂಕರ್ ಸ್ಫೋಟ ಘಟನೆಯಲ್ಲಿ 18 ಮಂದಿ ಭಾರತೀಯರು ಸೇರಿದಂತೆ ಕನಿಷ್ಠ 23 ಮಂದಿ ಮೃತಪಟ್ಟಿದ್ದು, ಇತರ 130 ಮಂದಿ ಗಾಯಗೊಂಡಿದ್ದಾರೆ.

ದುರಂತದಲ್ಲಿ ಕನಿಷ್ಠ 18 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಆದರೆ ಅವ ಗುರುತುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗಾಯಾಳುಗಳಲ್ಲಿ ಏಳು ಮಂದಿ ಭಾರತೀಯರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಹಾಗೂ ಇನ್ನೂ 16 ಮಂದಿ ಭಾರತೀಯರು ದುರಂತದ ಬಳಿಕ ನಾಪತ್ತೆಯಾಗಿದ್ದು ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

 ಸ್ಫೋಟದಲ್ಲಿ ಮೃತಪಟ್ಟವರಲ್ಲಿ ಏಳು ಮಂದಿ ತಮಿಳುನಾಡಿಗೆ ಸೇರಿದವರಾಗಿದ್ದು ಐವರು ಬಿಹಾರದವರು. ತಲಾ ನಾಲ್ವರು ರಾಜಸ್ತಾನ ಹಾಗೂ ಉತ್ತರಪ್ರದೇಶ ರಾಜ್ಯಗಳಿಗೆ ಸೇರಿದವರೆಂದು ತಿಳಿದುಬಂದಿದೆ. ಇತರ ಇಬ್ಬರು ಹರ್ಯಾಣದವರಾಗಿದ್ದು, ತಲಾ ಒಬ್ಬರು ದಿಲ್ಲಿ ಹಾಗೂ ಗುಜರಾತ್ ರಾಜ್ಯಗಳವರು. ಆಸ್ಪತ್ರೆಗೆ ದಾಖಲಾದ ಗಾಯಾಳುಗಳಲ್ಲಿ ಜೈಕುಮಾರ್, ಬೊಪಾಲನ್ ಹಾಗೂ ಮುಹಮ್ಮದ್, ಸಲೀಮ್ ತಮಿಳುನಾಡಿನವರಾಗಿದ್ದು, ರವೀಂದರ್ ಸಿಂಗ್ ಹಾಗೂ ಸುರೇಂದ್ರ ಕುಮಾರ್ ಮೂಲತಃ ರಾಜಸ್ಥಾನದವರು, ಉಳಿದಂತೆ ನೀರಜ್ ಕುಮಾರ್ ಬಿಹಾರದವರಾಗಿದ್ದು, ಸೋನು ಪ್ರಸಾದ್ ಉತ್ತರಪ್ರದೇಶಕ್ಕೆ ಸೇರಿದವರು.

ದುರಂತದಲ್ಲಿ ನಾಪತ್ತೆಯಾದವರಲ್ಲಿ ತಲಾ ಮೂವರು ತಮಿಳುನಾಡು ಹಾಗೂ ಉತ್ತರಪ್ರದೇಶದವರು. ಇನ್ನುಳಿದಂತೆ ತಲಾ ಇಬ್ಬರು ರಾಜಸ್ತಾನ, ಹರ್ಯಾಣದವರು. ಗುಜರಾತ್ ಹಾಗೂ ದಿಲ್ಲಯಂದ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ.್ನ

ನಾಪತ್ತೆಯಾದವರಲ್ಲಿ ಕೆಲವರು ಮೃತಪಟ್ಟವರ ಪಟ್ಟಿಯಲ್ಲಿ ಕೂಡಾ ಇರಬಹುದು. ಮೃತದೇಹಗಳು ಸುಟ್ಟು ಹೋಗಿರುವುದರಿಂದ ಅವುಗಳನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸುಡಾನ್ ದುರಂತದ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಎಲ್‌ಪಿಜಿ ಟ್ಯಾಂಕರ್ ಸ್ಪೋಟದಿಂದ ಹಾನಿಗೀಡಾದ ಕಾರ್ಖಾನೆಯಲ್ಲಿ 60 ಮಂದಿ ಭಾರತೀಯರು ದುಡಿಯುತ್ತಿದ್ದರು ಹಾಗೂ ಅವರ ಪೈಕಿ 53 ಮಂದಿ ದುರಂತ ಸಂಭವಿಸಿದ ಸಮಯದಲ್ಲಿ ಕಾರ್ಖಾನೆಯಲಿ ಹಾಗೂ ಸಮೀಪದ ವಸತಿ ಪ್ರದೇಶದಲ್ಲಿದ್ದುದಾಗಿ ತಿಳಿದುಬಂದಿದೆಯೆಂದು ಅವರು ಹೇಳಿದ್ದಾರೆ.

 ಈ ಮಧ್ಯೆ ಅಮೆರಿಕ ಪ್ರವಾಸದಲ್ಲಿರುವ ಸೂಡಾನ್ ಪ್ರಧಾನಿ ಅಬ್ದುಲ್ಲಾ ಹಮ್ದೆಕ್ ಅವರು ದುರಂತದಲ್ಲಿ ಮೃತಪಟ್ವವರಿಗಾಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸುರಕ್ಷಿತ ಸಾಮಾಗ್ರಿಗಳು ಇಲ್ಲದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News