ಅಂಚೆ ಇಲಾಖೆಯಲ್ಲಿ ಶೀಘ್ರ, ಸಮರ್ಪಕ ಕಾರ್ಯಕ್ಕೆ ಆದ್ಯತೆ: ರಾಜೇಂದ್ರ ಕುಮಾರ್

Update: 2019-12-05 17:01 GMT

ಉಡುಪಿ, ಡಿ.5: ಭಾರತೀಯ ಅಂಚೆ ಇಲಾಖೆ ಜನಸಾಮಾನ್ಯರ ಅನು ಕೂಲಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳ ವಿಸ್ತೃತ ಮಾಹಿತಿ ಹಾಗು ಆ ಯೋಜನೆಗಳು ಜನಸಾಮಾನ್ಯರನ್ನು ತಲುಪುವಲ್ಲಿ ನಮ್ಮ ಅಂಚೆ ಸಿಬ್ಬಂದಿಗಳು ಶ್ರಮ ವಹಿಸಬೇಕು. ಸೇವೆಯೊಂದಿಗೆ ಜನರ ವಿಶ್ವಾಸವನ್ನು ಗಳಿಸುವ ಬಗ್ಗೆ ಚಿಂತನೆ ನಡೆಸಬೇಕೆಂದು ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಉಡುಪಿ ಅಂಚೆ ವಲಯದಲ್ಲಿ ವಿವಿಧ ಯೋಜನೆಗಳಲ್ಲಿ ಸಾಧನೆ ಮಾಡಿದ ಇಲಾಖಾ ಸಿಬ್ಬಂದಿ ಗಳನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾರ್ವಜನಿಕರು ಅಂಚೆ ಇಲಾಖೆಯಲ್ಲಿ ಉತ್ತಮ ವ್ಯವಹಾರದೊಂದಿಗೆ ಆದಷ್ಟು ಹೆಚ್ಚಿನ ಖಾತೆ ತೆರೆಯುವತ್ತ ಸಿಬ್ಬಂದಿ ಗಳು ಮುತುವರ್ಜಿ ವಹಿಸಬೇಕು. ಅಂಚೆ ಇಲಾಖೆಯ ಮೂಲಭೂತ ಸೇವೆ ಯಾದ ಪತ್ರಗಳು, ತ್ವರಿತ ಅಂಚೆ, ನೋಂದಾಯಿತ ಅಂಚೆಗಳ ಬಟವಾಡೆ ಶೀಘ್ರ ಹಾಗು ಸಮರ್ಪಕವಾಗಿ ಆಗುವ ಕುರಿತು ಗಮನ ಹರಿಸಬೇಕು ಎಂದರು.
 ಇಲಾಖೆಯ ವಿವಿಧ ಯೋಜನೆಗಳಲ್ಲಿ ಸಾಧನೆ ಮಾಡಿದ ಇಲಾಖಾ ಸಿಬ್ಬಂದಿ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಪ್ರೌಢಶಾಲಾ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಸ್ವಚ್ಚತಾ ಮಿಷನ್ ರಸಪ್ರಶ್ನೆ ಹಾಗು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಹರ್ಷ ಎನ್. ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಉಡುಪಿ ವಿಭಾಗದ ಅಂಚೆ ಅಧೀಕ್ಷಕ ಸುಧಾಕರ ದೇವಾಡಿಗ ಉಪಸ್ಥಿತರಿದ್ದರು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಸ್ವಾಗತಿಸಿದರು. ಸವಿತಾ ಶೆಟ್ಟಿಗಾರ್ ಪ್ರಶಸ್ತಿ ವಿಜೇತರ ಮಾಹಿತಿ ನೀಡಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಸೂರ್ಯನಾರಾಯಣ ರಾವ್ ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News